ಸುರತ್ಕಲ್: ಕರಾವಳಿ ಸೇವಾ ಪ್ರತಿಷ್ಠಾನ ಸುರತ್ಕಲ್ ಇದರ ವತಿಯಿಂದ ದೀಪಾವಳಿ ಸಂಭ್ರಮದ ಪ್ರಯುಕ್ತ ಕುಣಿತ ಭಜನಾ ಸ್ಪರ್ಧೆ ರವಿವಾರ ಸುರತ್ಕಲ್ ಕರ್ನಾಟಕ ಸೇವಾ ವೃಂದದ ವತಿಯಿಂದ ಆಯೋಜಿಸಲಾಗಿತ್ತು. ಐದನೆಯ ವರ್ಷದ ಕಾರ್ಯಕ್ರಮವನ್ನು ಸಮಾಜ ಸೇವಕ ಮಹಾಬಲ ಪೂಜಾರಿ ಕಡಂಬೋಡಿಯವರು ಉದ್ಘಾಟಿಸಿ ಈ ಹಿಂದಿನ ಕಾಲದಲ್ಲಿ ಮನೆ ಮನೆಯಲ್ಲಿ ನಡೆಯುತ್ತಿದ್ದ ಭಜನೆ, ಭಜನೆ ಸಂಕೀರ್ತನೆ ಮತ್ತಿತರ ಸಂಪ್ರದಾಯಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕರಾವಳಿ ಸೇವಾ ಪ್ರತಿಷ್ಠಾನ ಕುಣಿತ ಭಜನೆಯ ಮೂಲಕ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ನುಡಿದರು. ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅಧ್ಯಕ್ಷತೆ ವಹಿಸಿ ಕರಾವಳಿ ಸೇವಾ ಪ್ರತಿಷ್ಠಾನದ ಮೂಲಕ ಯುವ ಸಮೂಹ ಹಿಂದೂ ಸಂಪ್ರದಾಯ ಆಚಾರ ವಿಚಾರಗಳಿಗೆ ಹೆಚ್ಚಿನ ಒತ್ತು ಕೊಡುವ ಮೂಲಕ ದೀಪಾವಳಿ ಸಾಮೂಹಿಕವಾಗಿ ಆಚರಿಸಲು ಯೋಜನೆ ರೂಪಿಸಿ ಯಶಸ್ವಿಯಾಗಿದೆ. ಇಂತಹ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗುವ ಮೂಲಕ ಕೌಟುಂಬಿಕ ಸಂಭ್ರಮದೊಂದಿಗೆ ದೀಪಾವಳಿ ಆಚರಿಸುವಂತಾಗಬೇಕು ಎಂದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಎಂ ಎಸ್ ಇ ಝೆಡ್ ಅಧಿಕಾರಿ ಜಯಪ್ರಕಾಶ್ ಸೂರಿಂಜೆ, ಸಂದೀಪ್ ಪಚ್ಚನಾಡಿ, ಗಣೇಶ್ ಭಟ್ ಕೃಷ್ಣಾಪುರ, ರಕ್ಷಿತ್ ಪೂಜಾರಿ, ಪುಷ್ಪರಾಜ್ ಮುಕ್ಕ, ಆಶಿತ್ ನೋಂಡ, ಸಂಜಿತ್ ಶೆಟ್ಟಿ, ವರುಣ್ ಚೌಟ ಮತ್ತಿತರರು ಉಪಸ್ಥಿತರಿದ್ದರು. ಕರಾವಳಿ ಸೇವಾ ಪ್ರತಿಷ್ಠಾನ ಸುರತ್ಕಲ್ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ್ ಶೆಟ್ಟಿ ಎಡಿಮೆಮಾರ್ ನಿರೂಪಿಸಿದರು.