“ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಗೆ ಯಕ್ಷಗಾನ ಸಹಕಾರಿ“ -ರಮೇಶ್ ಭಟ್ ಎಸ್.ಜಿ.

“ಯಕ್ಷ ಸಿರಿ” ಯಕ್ಷಗಾನ ತರಬೇತಿ ಕೇಂದ್ರದ ತೃತೀಯ ವಾರ್ಷಿಕೋತ್ಸವ

ಸುರತ್ಕಲ್: ಬಂಟರ ಸಂಘ(ರಿ) ಸುರತ್ಕಲ್ ಇದರ ವತಿಯಿಂದ ನಡೆಸಲ್ಪಡುವ “ಯಕ್ಷ ಸಿರಿ” ಯಕ್ಷಗಾನ ತರಬೇತಿ ಕೇಂದ್ರದ ತೃತೀಯ ವಾರ್ಷಿಕೋತ್ಸವ ಸಮಾರಂಭ ಸುರತ್ಕಲ್ ಬಂಟರ ಸಂಘದ ವಠಾರದಲ್ಲಿ ಜರುಗಿತು. ಗೋವಿಂದದಾಸ ಕಾಲೇಜು ಸುರತ್ಕಲ್ ಇದರ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್.ಜಿ. ಇವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು, “ನಾನು ಸುರತ್ಕಲ್ ಬಂಟರ ಸಂಘವನ್ನು ಹತ್ತಿರದಿಂದ ಗಮನಿಸುತ್ತ ಬಂದವನು. ಪ್ರತೀ ಸ್ಪರ್ಧೆಯಲ್ಲೂ ಸುರತ್ಕಲ್ ಬಂಟರ ಸಂಘ ಪ್ರಶಸ್ತಿ ಪಡೆದುಕೊಂಡೇ ಬಂದಿದೆ. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಂಘ ಸದಾ ಮುಂದಿದೆ. ಬಹುಷಃ ಇದೇ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿಗೂ ಸಂಘ ಭಾಜನವಾಗಿದೆ. ಯಕ್ಷಗಾನ ಅನ್ನುವುದು ಶ್ರೇಷ್ಠವಾದ ಕಲೆ. ಯಕ್ಷಗಾನ ಕಲಾವಿದನಿಗೆ ಭಾಷಾ ಶುದ್ಧಿ ಮತ್ತು ಸಂವಹನಾ ಸಾಮರ್ಥ್ಯವಿದೆ. ಪುರಾಣದ ಜ್ಞಾನ ಸಂಪಾದನೆಗೆ ಯಕ್ಷಗಾನ ಕಲೆ ಪೂರಕ. ಪುರಾಣ ಪುರುಷರ ಆದರ್ಶ ಚರಿತ್ರೆ ಮಕ್ಕಳಿಗೆ ತಿಳಿಯುತ್ತದೆ. ಹೀಗಾಗಿ ಇಂದಿನ ಮಕ್ಕಳಿಗೆ ಇದರ ತರಬೇತಿ ಅವಶ್ಯ. ಮಕ್ಕಳ ವ್ಯಕ್ತಿತ್ವದ ಸಕಾರಾತ್ಮಕ ಬೆಳವಣಿಗೆಗೆ ಇದು ಸಹಕಾರಿ. ಇಷ್ಟು ಮಾತ್ರವಲ್ಲದೆ ಕಲೆಯಲ್ಲಿ ಮುಂದಿರುವ ಮಕ್ಕಳು ಕಲಿಕೆಯಲ್ಲೂ ಮುಂದಿದ್ದಾರೆ ಎನ್ನುವುದನ್ನು ಸಾಧಿಸಿ ತೋರಿಸಲು ಯಕ್ಷಸಿರಿಯ ಮಕ್ಕಳ ಶೈಕ್ಷಣಿಕ ಸಾಧನೆಗಾಗಿ ಅಭಿನಂದಿನಾ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಘಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತೇನೆ“ ಎಂದರು.
ಬಂಟರ ಸಂಘ ಸುರತ್ಕಲ್ ಇದರ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿ ಮಾತಾಡಿ, “ಯಕ್ಷಗಾನ ತುಳುನಾಡಿನ ಹೆಸರಾಂತ ಕಲೆಯಾಗಿದ್ದು ಮಕ್ಕಳಿಗೆ ಕಲೆಯ ಮೇಲೆ ಆಸಕ್ತಿ ಬೆಳೆಯಲು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳು ಯಕ್ಷಗಾನದ ಜೊತೆಗೆ ಶೈಕ್ಷಣಿಕ ಕ್ರೀಡಾ ಚಟುವಟಿಕೆಗಳಲ್ಲೂ ಮುಂದಿರುವುದು ಖುಷಿಯ ವಿಚಾರ” ಎಂದರು.


ಮುಖ್ಯ ಅತಿಥಿಗಳಾಗಿ ಉದ್ಯಮಿ ಸತೀಶ್ ಮುಂಚೂರು, ದ.ಕ ಜಿಲ್ಲಾ ಬಿ.ಜೆ.ಪಿ ವಕ್ತಾರ ರಾಜ್‌ ಗೋಪಾಲ್ ರೈ, ಹೋಟೆಲ್ ಉದ್ಯಮಿ ಚಂದ್ರಹಾಸ ಶೆಟ್ಟಿ ಕಂಫಟ್೯, ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ಮಮತ ಪ್ರೇಮ್‌ ನಾಥ್ ಹೆಗ್ಡೆ, ಸೀಮಾ ಶೆಟ್ಟಿ ಸುಭಾಷಿತನಗರ, ಸಹನಾ ರಾಜೇಶ್ ರೈ, ಯಕ್ಷ ಗುರು ರಾಕೇಶ್ ರೈ ಅಡ್ಕ, ಸಂಘದ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಪೂಂಜಾ, ಪಾಲ್ಗೊಂಡಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಪ್ರವೀಣ್ ಪಿ. ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಸಾಂಸ್ಕೃತಿಕ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಮಧ್ಯ, ಮಹಿಳಾ ವೇದಿಕೆಯ ಅಧ್ಯೆಕ್ಷೆ ಸರೋಜ ತಾರಾನಾಥ್ ಶೆಟ್ಟಿ ಉಪಸ್ಥಿತರಿದ್ದರು.
ಅನೂಪ್ ಶೆಟ್ಟಿ ಕಟ್ಲ ದೇವರನ್ನು ಸ್ತುತಿಸಿದರು. ಕವಿತಾ ಪುಷ್ಪರಾಜ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಡಾ.ಸುಧಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ 90 ಶೇಕಡಾ ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ “ಯಕ್ಷಸಿರಿ”ಯ ವಿದ್ಯಾಥಿಗಳನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಯಕ್ಷಸಿರಿಯ ವಿದ್ಯಾರ್ಥಿಗಳು ಮತ್ತು ಇತರ ಕಲಾವಿದರ ಕೂಡುವಿಕೆಯೊಂದಿಗೆ “ಶ್ರೀ ದೇವಿ ಮಹಾತ್ಮ” ಯಕ್ಷಗಾನ ಬಯಲಾಟ ನಡೆಯಿತು.

error: Content is protected !!