ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬ್ಯಾರಿ ಭಾಷೆಯಲ್ಲಿ ಕೋಮುಗಲಭೆಗೆ ಉತ್ತೇಜನ ನೀಡುವ ಸುಳ್ಳು ಸಂದೇಶವನ್ನು ಹರಡಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ತಾಳಿಪಾಡಿ ಗುತ್ತಕಾಡು ಶಾಂತಿನಗರ ನಿವಾಸಿ ಮೊಹಮ್ಮದ್ ಅನ್ವರ್ (44) ಮತ್ತು ಅವರ ಸಹೋದರ ತಾಯಿರ್ ನಕಾಶ್ (42) ಬಂಧಿತರು.

ಆರೋಪಿಗಳು ಅ.15ರಂದು ವಾಟ್ಸ್ಆಪ್ ಗ್ರೂಪ್ ಒಂದರಲ್ಲಿ ಒಂದು ಸಂಘಟಿತ ಗುಂಪಿನ ಬಗ್ಗೆ ಸುಳ್ಳು ಮಾಹಿತಿ ಹೊಂದಿರುವ ಸಂದೇಶವನ್ನು ರವಾನಿಸಿದ್ದು,
ಸಾಮಾಜಿಕ ಜಾಲತಾಣದಲ್ಲಿ ಬಂಧಿತರು ಹರಡಿದ ಸಂದೇಶದಲ್ಲಿ, “ಒಂದು ಗ್ಯಾಂಗ್ ಇದೆ. ಯಾರೂ ನಿರ್ಲಕ್ಷ್ಯ ಮಾಡಬೇಡಿ. ಬಜಪೆ ಸುರತ್ಕಲ್ ಅಂತಲ್ಲ, ಅವರ ಗ್ಯಾಂಗ್ ಇರುವುದು ಭಟ್ಟಕೋಡಿಯಲ್ಲಿ. ಆದ್ದರಿಂದ ಕಿನ್ನಿಗೋಳಿಯವರು ಎಚ್ಚರ ವಹಿಸಬೇಕು. ಈ ಕುಡುಕರ ಗ್ಯಾಂಗ್ ಇರುವುದು ಭಟ್ಟಕೋಡಿ ಬಾರ್ ನಲ್ಲಿ. ನಾನು ಖುದ್ದು ಅವರ ತಂಡವನ್ನು ಭಟ್ಟಕೋಡಿಯಲ್ಲಿ ನೋಡಿದ್ದೇನೆ. ಸುಮಾರು ಒಂದೂವರೆ ತಿಂಗಳ ಹಿಂದೆ 15 ಜನ ಭಟ್ಟಕೋಡಿಯಲ್ಲಿ ಕುಡಿದು ಪಾರ್ಟಿ ಮಾಡಿ ಹೋಗಿದ್ದಾರೆ. ಯಾರೂ ನಿರ್ಲಕ್ಷ್ಯ ಮಾಡಬೇಡಿ” ಎಂದು ಹೇಳಿ ಸಾರ್ವಜನಿಕರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ.

ಈ ಸಂದೇಶವನ್ನು ವಾಟ್ಸ್ಆಪ್ ಗ್ರೂಪ್ನಲ್ಲಿ ಹಂಚಿಕೊಂಡ ಆರೋಪಗಳ ಮೇಲೆ ಮೂಲ್ಕಿ ಪೊಲೀಸ್ ಠಾಣೆ ಈ ಸಹೋದರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.
ಈ ಸಂದರ್ಭದಲ್ಲಿ, ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಆಂತಕಕಾರಿ ಸಂದೇಶಗಳ ಬಗ್ಗೆ ಸಾರ್ವಜನಿಕರು ಗಮನ ಕೊಡಬಾರದು. ಇಂತಹ ಸಂದೇಶಗಳನ್ನು ಇನ್ನೊಬ್ಬರ ಜತೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು. ಸುಳ್ಳು ಸಂದೇಶಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಾದ ಕಾನೂನು ಕ್ರಮ ಜರಗುವುದಾಗಿ ಪೊಲೀಸರು ತಿಳಿಸಿದ್ದಾರೆ.