ಮಂಗಳೂರು: ಅತ್ಯಾಚಾರಕ್ಕೀಡಾಗಿ ಕೊಲೆಯಾದ ದಲಿತ ಬಾಲಕಿಗೆ ನ್ಯಾಯ ಒದಗಿಸುವ ಬದಲು ಸಚಿವ ಪ್ರಿಯಾಂಕ ಖರ್ಗೆ ರಾಜಕೀಯ ದೊಂಬರಾಟ ಹೇಳಿಕೆಯಲ್ಲಿ ತೊಡಗಿದ್ದಾರೆ ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯಿಂದ ಮೈಸೂರಿಗೆ ಬಲೂನ್ ಮಾರಲು ಪೋಷಕರೊಂದಿಗೆ ಬಂದಿದ್ದ 10 ವರ್ಷದ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದು ವರೆಗೂ ಯಾವುದೇ ಪರಿಹಾರವನ್ನು ಆ ದಲಿತ ಬಾಲಕಿಯ ಕುಟುಂಬಕ್ಕೆ ರಾಜ್ಯ ಸರಕಾರ ನೀಡಿಲ್ಲ. ಶುಕ್ರವಾರ ನಡೆದ ನಡೆದ ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೈಕಮಾಂಡನ್ನು ಮೆಚ್ಚಿಸಲು, ಯಾವುದೇ ಸಂಬಂಧವಿಲ್ಲದೆ ನೆರೆ ರಾಜ್ಯದ ಆಪತ್ತುಗಳಿಗೆ ಪರಿಹಾರ ನೀಡುವ ರಾಜ್ಯ ಸರಕಾರ, ಅತ್ಯಾಚಾರ ಹಾಗೂ ಕೊಲೆಯಾದ ದಲಿತ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ ಎಂಬುದು ನಿಜಕ್ಕೂ ಸರಕಾರಕ್ಕೆ ನಾಚಿಕೆಯ ಸಂಗತಿ. ಪ್ರಿಯಾಂಕಾ ಖರ್ಗೆಯವರು ರಾಜ್ಯ ಸರಕಾರದ ವೈಫಲ್ಯವನ್ನು ಮುಚ್ಚಿಹಾಕಲು ಶತಾಯಗತಾಯ ಪ್ರಯತ್ನಿಸುತ್ತಿರುವುದನ್ನು ಬಿಟ್ಟು, ತಮ್ಮ ಜಿಲ್ಲೆಯ ದಲಿತ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡುವ ಕಾರ್ಯಮಾಡಲಿ ಎಂದು ಡಾ. ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.