ಬಂಟ್ವಾಳ: ಪರಸ್ಪರ ಗಲಾಟೆ ನಡೆಸುತ್ತಿದ್ದ ಮಂಚಿ ಗ್ರಾಮದ ಯುವಕರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ಟೋಬರ್ 12ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಕೃಷ್ಣ ನಾಯ್ಕರು ಬೀಟ್ ಸಂಚರಿಸುತ್ತಿದ್ದ ವೇಳೆ, ಮಂಚಿ ಕಟ್ಟೆ ಪ್ರದೇಶದಲ್ಲಿ ಕೆಲವರು ಗಲಾಟೆ ನಡೆಸುತ್ತಿರುವ ಕುರಿತು ಅವರಿಗೆ ಬಾತ್ಮೀದಾರರಿಂದ ಮಾಹಿತಿ ಲಭಿಸಿತು.
ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಲ್ಲಿ ವಿಜೇತ್, ರಕ್ಷಿತ್ ಕೊಟ್ಟಾರಿ, ಪುಷ್ಪರಾಜ್, ಅಜೇಯ್, ಜಮೀರ್ ಹಾಗೂ ಮಹಮ್ಮದ್ ಮುಸ್ತಫಾ ಸೇರಿದಂತೆ ಕೆಲ ಯುವಕರು ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು, ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ವರ್ತಿಸಿರುವುದು ಕಂಡುಬಂದಿತ್ತು.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 153/2025ರಂತೆ, ಕಲಂ 189(2), 191(2), 196(1)(a), 196(1)(b) R/W 190 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಲಾಗಿದೆ.