ಕಾರ್ಕಳ : ದೀಪಾವಳಿ ಹಬ್ಬದ ಸಿದ್ಧತೆ ಹಿನ್ನೆಲೆಯಲ್ಲಿ, ಕಾರ್ಕಳ ತಾಲೂಕಿನ ಮಿಯಾರಿನಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಸಂಗ್ರಹಿಸಿದ್ದ ಮೂವರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದು, ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಿಯಾರು ನಿವಾಸಿಗಳಾದ ಸತ್ಯೇಂದ್ರ ನಾಯಕ್ (70), ಶ್ರೀಕಾಂತ್ ನಾಯಕ್ (37) ಮತ್ತು ರಾಮಾನಂದ ನಾಯಕ್ (48) ಬಂಧಿತ ಆರೋಪಿಗಳು.
ಈ ಮೂವರು ಯಾವುದೇ ಪರವಾನಗಿ ಇಲ್ಲದೆ ಮತ್ತು ಮಾನವ ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ಸ್ಫೋಟಕ ಪಟಾಕಿಗಳನ್ನು ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ, ಕಾರ್ಕಳ ಪೊಲೀಸರು ಗುರುವಾರ(ಅ.16) ಬೆಳಿಗ್ಗೆ ಮಿಯಾರು ಗ್ರಾಮದ ದೆಂದಬೆಟ್ಟ ಪ್ರದೇಶದಲ್ಲಿ ದಾಳಿ ನಡೆಸಿದರು. ಆರೋಪಿಗಳು ಹಳೆಯ ವಸತಿ ಕಟ್ಟಡವೊಂದರಲ್ಲಿ ಅಗತ್ಯ ಪರವಾನಗಿ ಅಥವಾ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದರು ಎಂದು ವರದಿಯಾಗಿದೆ.

ಪೊಲೀಸರು ಸುಮಾರು ಒಂದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ, ಮೂರು ಕಂಟೇನರ್‌ಗಳಷ್ಟು ಪಟಾಕಿ ದಾಸ್ತಾನನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ವಿವಿಧ ಬ್ರಾಂಡೆಡ್ ಪಟಾಕಿ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮತ್ತು ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
ಪರವಾನಗಿ ಇಲ್ಲದೆ ಅಥವಾ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಪಟಾಕಿಗಳನ್ನು ಸಂಗ್ರಹಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇಂತಹ ಅಕ್ರಮ ದಾಸ್ತಾನು ಮತ್ತು ಪಟಾಕಿ ಮಾರಾಟದ ವಿರುದ್ಧ ನಿಗಾವಹಿಸಲಾಗುವುದು ಮತ್ತು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.