ಮಂಗಳೂರು: ಶ್ರೀ ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡು ಶ್ರೀ ಸಂಸ್ಥಾನದ ದಶಮ ಸಂಭ್ರಮದ ಸಂಕಲ್ಪ “ಬಂಟ ಸಂಸ್ಕೃತಿ ಪರಂಪರೆ ಅನಾವರಣ” ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಹಾಮಂಡಲದ ಪದಗ್ರಹಣ ಸಮಾರಂಭ ಅಕ್ಟೋಬರ್ 19ರಂದು (ಭಾನುವಾರ) ಸಂಜೆ 3 ಗಂಟೆಗೆ ಅಡ್ಯಾರ್ ಗಾರ್ಡನ್‌ನ ವಿ.ಕೆ. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಮಹಾಮಂಡಲದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.
ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾರ್ಯಕ್ರಮವನ್ನು ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಪ.ಪೂ. ಶ್ರೀ ಡಾ. ವಿದ್ಯಾವಾಚಾಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು ಅವರ ದಿವ್ಯ ಸಾನಿಧ್ಯದಲ್ಲಿ ಬೆಂಗಳೂರು ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ ಡಾ. ಕೆ. ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಡಾ. ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, (ಸಿಎಂಡಿ, ಹೇರಂಭಾ ಇಂಡಸ್ಟ್ರೀಸ್, ಮುಂಬೈ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಶಿಧರ ಶೆಟ್ಟಿ (ಆಡಳಿತ ನಿರ್ದೇಶಕ, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ. ಲಿ.) ಅವರು ದಶಮ ಸಂಭ್ರಮ ಸಂಕಲ್ಪ ಅನಾವರಣಗೊಳಿಸಲಿದ್ದಾರೆ. ಡಾ. ಎಂ. ಮೋಹನ್ ಆಳ್ವರ, (ಕಾರ್ಯಾಧ್ಯಕ್ಷ, ಶ್ರೀ ಬಾರ್ಕೂರು ಮಹಾಸಂಸ್ಥಾನ ಟ್ರಸ್ಟ್) ಅವರು ದಶಮ ಸಂಭ್ರಮದ ಆಶಯ ನುಡಿಗಳನ್ನು ನೀಡಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಶ್ರೀ ಸಂತೋಷ್ ಶ್ರೀಪಾದರು ನೀಡುವ ವ್ಯಾಖ್ಯಾನದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರಿಂದ ಗಾನ ಸುಧೆ – ಯಕ್ಷ ವ್ಯಾಖ್ಯಾನ ವೈಭವ (ಕರ್ಣ ಪರ್ವ) ನಡೆಯಲಿದೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಡಾ. ಮೋಹನ್ ಆಳ್ವರ ಅವರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಮಂಡಲಗಳನ್ನು ರಚಿಸಲಾಗಿದ್ದು, ಜಿಲ್ಲಾ ಮಹಾಮಂಡಲ, ತಾಲೂಕು ಮಂಡಲ ಸೇರಿದಂತೆ 8 ಮಂಡಲಗಳ ಪದಗ್ರಹಣ ನಡೆಯಲಿದೆ. ಪ್ರತಿ ಘಟಕಕ್ಕೂ ಜವಾಬ್ದಾರಿಗಳನ್ನು ಹಂಚಿ ಕೊಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಆನಂದ ಶೆಟ್ಟಿ ಅಡ್ಯಾರ್ (ದ.ಕ. ಮಹಾ ಮಂಡಲ ಅಧ್ಯಕ್ಷ), ಕೆ. ರಾಜೇಶ್ ಶೆಟ್ಟಿ ಶಬರಿ (ಸಂಸ್ಥಾನದ ವಕ್ತಾರ), ಭಾಸ್ಕರ ಚಂದ್ರ ಶೆಟ್ಟಿ, ಚಂದ್ರಹಾಸ ಕಂಫರ್ಟ್ (ಮಹಾ ಮಂಡಲ ಪ್ರಧಾನ ಕಾರ್ಯದರ್ಶಿ), ಚಂದ್ರಪ್ರಕಾಶ್ ಶೆಟ್ಟಿ ತುಂಬೆಗುತ್ತು (ಪ್ರಧಾನ ಸಂಚಾಲಕ), ನಿಟ್ಟೆಗುತ್ತು ರವಿರಾಜ್ ಶೆಟ್ಟಿ (ಮಂಗಳೂರು ಮಂಡಲ ಗೌರವಾಧ್ಯಕ್ಷ) ಉಪಸ್ಥಿತರಿದ್ದರು.