ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಕೋರ್ಟ್ ಮುಂದೆ ಹಾಜರಾಗಿ ಒಂದೇ ಸ್ಥಳದಲ್ಲಿ ಹತ್ತು ಶವ ಹೂತಿದ್ದಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಚಿನ್ನಯ್ಯ ಎಸ್‌ಐಟಿ ಅಧಿಕಾರಿಗಳ ಮುಂದೆ ಈ ಹಿಂದೆ ಹೇಳದೆ ಇದ್ದ ವಿಚಾರವನ್ನು ಚಿನ್ನಯ್ಯ ನ್ಯಾಯಾಲಯದ ಮುಂದೆ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಆದರೆ, ಯಾವ ಜಾಗದಲ್ಲಿ, ಎಲ್ಲಿ, ಯಾವಾಗ ಎಂದು ಮಾತ್ರ ಹೇಳದೇ ಇರುವುದರಿಂದ ಚಿನ್ನಯ್ಯನ ಈ ಹೇಳಿಕೆ ತನಿಖಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಬೆಳ್ತಂಗಡಿ ಕೋರ್ಟ್‌ನಲ್ಲಿ ಬಿಎನ್ಎಸ್ 183 ಅಡಿ ಹೇಳಿಕೆ ದಾಖಲಿಸುವ ವೇಳೆ ಒಂದೇ ಜಾಗದಲ್ಲಿ ಹತ್ತು ಶವ ಹೂತಿರುವುದಾಗಿ ಹೇಳಿಕೆ ಕೊಟ್ಟಿದ್ದು ಎಸ್ಐಟಿ ತನಿಖೆ ನಡೆಸಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಚಿನ್ನಯ್ಯ ಸದ್ಯ ಶಿವಮೊಗ್ಗ ಜೈಲಿನಲ್ಲಿರುವುದರಿಂದ, ಅಲ್ಲೇ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಈ ಹೇಳಿಕೆಯ ಸತ್ಯಾಸತ್ಯತೆ ಮತ್ತು ಹಿಂದಿನ ಹೇಳಿಕೆಗಳಿಗೂ ಇದಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ ಎಸ್ಐಟಿ ತನಿಖೆ ಮುಂದುವರಿಸಲಿದೆ. ಸದ್ಯಕ್ಕೆ ಚಿನ್ನಯ್ಯ ಶಿವಮೊಗ್ಗ ಜೈಲಿನಲ್ಲಿದ್ದು, ಈತನ ವಿಚಾರಣೆ ನಡೆಸಲು ಎಸ್‌ಐಟಿ ಪೊಲೀಸರು ಅನುಮತಿ ಕೋರಿದ್ದಾರೆ.
ಕೊಲೆ ಮತ್ತು ಲೈಂಗಿಕ ದೌರ್ಜನ್ಯ ನಡೆದಿರುವ 10 ಮೃತದೇಹಗಳನ್ನು ಹೂತಿರುವುದಾಗಿ ಸಾಕ್ಷಿದಾರ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದ. ಆದರೆ, ನಂತರದ ತನಿಖೆಯಲ್ಲಿ ಶವಗಳನ್ನು ಕಾನೂನುಬದ್ಧವಾಗಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ. ಈ ವ್ಯತಿರಿಕ್ತ ಹೇಳಿಕೆಗಳ ಹಿನ್ನೆಲೆಯಲ್ಲಿ, ಎಸ್‌ಐಟಿ ಚಿನ್ನಯ್ಯನನ್ನು ಮತ್ತೆ ವಿಚಾರಣೆ ನಡೆಸಲು ನಿರ್ಧರಿಸಿದೆ.
ಸಾಕ್ಷಿದಾರನ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವ ಕಾರಣ ಆತನ ಹೇಳಿಕೆಗಳನ್ನು ಮರುಪರಿಶೀಲನೆ ಮಾಡುವ ಸಲುವಾಗಿ ಆತನನ್ನು ಪೊಲೀಸ್ ಕಸ್ಟಡಿಗೆ ಪಡೆಯುವ ಬದಲು, ಆತ ಪ್ರಸ್ತುತ ಇರುವ ಶಿವಮೊಗ್ಗ ಜೈಲಿನಲ್ಲಿಯೇ ವಿಚಾರಣೆ ನಡೆಸಲು ಎಸ್‌ಐಟಿ ಅನುಮತಿ ಕೇಳಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ಗಿರೀಶ್ ಮಟ್ಟಣ್ಣವರ್ ವಿರುದ್ಧ ಬುರುಡೆ ಪ್ರಕರಣ ಕ್ಕೆ ಸಂಬಂಧಿಸಿ ವಂಚನೆ ಪ್ರಕರಣ ದಾಖಲಾಗಿತ್ತು. ಸದ್ಯ ಆ ಪ್ರಕರಣದ ವಿಚಾರಣೆಯೂ ಆರಂಭವಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಮತ್ತು ರೌಡಿಶೀಟರ್ ಮದನ್ ಬುಗುಡಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರೌಡಿಶೀಟರ್ ಮದನ್ ಬುಗುಡಿ ತನ್ನ ವಕೀಲರೊಂದಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು.