ಕುವೈತ್ ಸಿಟಿ/ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಅಕ್ಷರಶಃ ಕೈಮೀರಿ ಹೋಗಿದೆ. ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದ್ದು, ಇಂದು ನಡೆದ ಅಚಾತುರ್ಯವೊಂದರಲ್ಲಿ ಅಮೆರಿಕದ ಅತ್ಯಂತ ಶಕ್ತಿಶಾಲಿ ಮೂರು F-15E ಸ್ಟ್ರೈಕ್ ಈಗಲ್ ಯುದ್ಧ ವಿಮಾನಗಳು ಕುವೈತ್ ಭೂಪ್ರದೇಶದಲ್ಲಿ ಪತನಗೊಂಡಿವೆ. ವಿಷಯವೆಂದರೆ, ಈ ವಿಮಾನಗಳನ್ನು ಶತ್ರು ಪಡೆಗಳಲ್ಲ, ಬದಲಿಗೆ ಅಮೆರಿಕದ ಮಿತ್ರ ರಾಷ್ಟ್ರವಾದ ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆಯೇ ಅಚಾತುರ್ಯವಾಗಿ ಹೊಡೆದುರುಳಿಸಿದೆ!

ರಕ್ತಸಿಕ್ತವಾಯಿತೇ ಅಮೆರಿಕ ರಾಯಭಾರ ಕಚೇರಿ?
ಇರಾನ್ ನಡೆಸಿದ ಭೀಕರ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದಾಗಿ ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಆವರಣದಲ್ಲಿ ಬೆಂಕಿ ಮತ್ತು ದಟ್ಟವಾದ ಹೊಗೆ ಆವರಿಸಿದೆ. ರಾಯಭಾರ ಕಚೇರಿಯು ತನ್ನ ಸಿಬ್ಬಂದಿ ಮತ್ತು ನಾಗರಿಕರಿಗೆ “ಯಾವುದೇ ಕಾರಣಕ್ಕೂ ಹೊರಬರಬೇಡಿ, ಕಿಟಕಿಗಳಿಂದ ದೂರವಿರಿ ಮತ್ತು ಕಟ್ಟಡದ ತಳಮಹಡಿಯಲ್ಲಿ ಆಶ್ರಯ ಪಡೆಯಿರಿ” ಎಂದು ತುರ್ತು ಎಚ್ಚರಿಕೆ ನೀಡಿದೆ. ಇರಾನ್‌ನ ಈ ಪ್ರತೀಕಾರದ ದಾಳಿಯು ಕುವೈತ್ ಮಾತ್ರವಲ್ಲದೆ ಕತಾರ್, ಯುಎಇ ಮತ್ತು ಸೌದಿ ಅರೇಬಿಯಾದ ಮೇಲೂ ಗುರಿಯಿಟ್ಟಿದ್ದು, ಇಡೀ ಗಲ್ಫ್ ರಾಷ್ಟ್ರಗಳು ಯುದ್ಧದ ಜ್ವಾಲೆಯಲ್ಲಿ ಬೇಯುವ ಭೀತಿ ಎದುರಾಗಿದೆ.

ಅಧ್ಯಕ್ಷ ಟ್ರಂಪ್ ಅವರ ಆತಂಕಕಾರಿ ಹೇಳಿಕೆ:
ಇದೆಲ್ಲದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆ ಜಗತ್ತನ್ನೇ ನಡುಗಿಸಿದೆ. “ಈ ಯುದ್ಧ ಇನ್ನೂ 4 ರಿಂದ 5 ವಾರಗಳ ಕಾಲ ಮುಂದುವರಿಯಲಿದೆ ಮತ್ತು ಇನ್ನು ಹೆಚ್ಚಿನ ಅಮೆರಿಕನ್ ಸೈನಿಕರು ಮೃತಪಡುವ ಸಾಧ್ಯತೆಯಿದೆ, ಅದು ಹಾಗೆಯೇ ಆಗುವುದು (That’s the way it is)” ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕದ ವಾಯುದಾಳಿ ಎಷ್ಟು ಭೀಕರವಾಗಿದೆ ಎಂದರೆ, ಇರಾನ್‌ನಲ್ಲಿ ಆಡಳಿತ ನಡೆಸಲು ತಾವು ಅಂದುಕೊಂಡಿದ್ದ ಎಲ್ಲಾ ಸಂಭಾವ್ಯ ಅಭ್ಯರ್ಥಿಗಳು ಈಗಾಗಲೇ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.
ಇಸ್ರೇಲ್‌ನಿಂದ ಮತ್ತೊಂದು ರಣರಂಗದ ಸೃಷ್ಟಿ:
ಇತ್ತ ಇಸ್ರೇಲ್ ಪಡೆಗಳು ಲೆಬನಾನ್ ಮೇಲೆ ದಾಳಿ ನಡೆಸುವ ಮೂಲಕ ಯುದ್ಧವನ್ನು ಮತ್ತಷ್ಟು ವಿಸ್ತರಿಸಿವೆ. ಇದರಿಂದಾಗಿ ಕಳೆದ ವರ್ಷ ಏರ್ಪಟ್ಟಿದ್ದ ಕದನ ವಿರಾಮ ಸಮಾಧಿಯಾದಂತಾಗಿದೆ. ಜಗತ್ತು ಮತ್ತೊಂದು ಮಹಾಯುದ್ಧದ ಅಂಚಿನಲ್ಲಿ ನಿಂತಿದ್ದು, ಕುವೈತ್ ರಸ್ತೆಯಲ್ಲಿ ಅಮೆರಿಕದ ಯುದ್ಧ ವಿಮಾನಗಳು ಬೆಂಕಿಯುಂಡೆಯಂತೆ ಬಿದ್ದಿರುವ ದೃಶ್ಯಗಳು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿವೆ.

ಮುಂದೇನು?:
ಇಡೀ ಜಗತ್ತು ಈಗ ವಾಷಿಂಗ್ಟನ್‌ನತ್ತ ಮುಖ ಮಾಡಿದೆ. ಸೋಮವಾರ ಬೆಳಿಗ್ಗೆ ಅಮೆರಿಕದ ರಕ್ಷಣಾ ಇಲಾಖೆ ನಡೆಸಲಿರುವ ಪತ್ರಿಕಾಗೋಷ್ಠಿಯಲ್ಲಿ ಇರಾನ್ ಮೇಲೆ ಇನ್ನು ಎಂತಹ ಭೀಕರ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಬಹಿರಂಗವಾಗಲಿದೆ.