ಮಂಗಳೂರು (ಸಸಿಹಿತ್ಲು): ಐತಿಹಾಸಿಕ ಹಿನ್ನೆಲೆಯುಳ್ಳ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನ ಕ್ಷೇತ್ರದ ಬ್ರಹ್ಮಕಲಶೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಇಡೀ ಕ್ಷೇತ್ರವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ನಾಡಿನ ಭಕ್ತರ ಬಹುಕಾಲದ ನಿರೀಕ್ಷೆಯಂತೆ ಬ್ರಹ್ಮಕಲಶೋತ್ಸವದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು ಮಾ. 0ರ ಬುಧವಾರದಂದು ದೇವಳದ ಧಾರ್ಮಿಕ ವಿಧಿವಿಧಾನಗಳು ಅದ್ದೂರಿಯಾಗಿ ಚಾಲನೆ ಪಡೆಯಲಿವೆ. ಸುತ್ತಮುತ್ತಲಿನ ಊರಿನ ಭಕ್ತಾದಿಗಳಿಂದ ದೇವಸ್ಥಾನಕ್ಕೆ ಅರ್ಪಿಸುವ ಭಕ್ತಿಪೂರ್ವಕ ʻಹಸಿರು ಹೊರೆಕಾಣಿಕೆ’ ಸಮರ್ಪಣಾ ಮೆರವಣಿಗೆಯು ಅದ್ದೂರಿಯಾಗಿ ನಡೆಯಲಿದೆ.

ಮಾ. 4ರ ಮುಂಜಾನೆ ಬೆಳಿಗ್ಗೆ 08.30ಕ್ಕೆ: ಕ್ಷೇತ್ರಕ್ಕೆ ಮಂಗಳಕರವಾದ ತೋರಣ ಮುಹೂರ್ತ ನೆರವೇರಲಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನ್ನದಾನಕ್ಕಾಗಿ ದಾಸ್ತಾನು ಸಂಗ್ರಹಿಸುವ ಉಗ್ರಾಣ ಮುಹೂರ್ತ ನಡೆಯಲಿದೆ.
ದೇವಸ್ಥಾನದ ಆಡಳಿತ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ ಈಗಾಗಲೇ ಎಲ್ಲಾ ಮೂಲಸೌಕರ್ಯಗಳು, ಪೆಂಡಾಲ್ ವ್ಯವಸ್ಥೆ ಹಾಗೂ ಭಕ್ತರಿಗೆ ಬೇಕಾದ ಅನ್ನಪ್ರಸಾದದ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ, ಈಗಾಗಲೇ ಸಾವಿರಾರು ಭಕ್ತರು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದ್ದಾರೆ. ನಾಳೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದ್ದು, ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯು ವಿನಂತಿಸಿದೆ.
