ಕರ್ನಾಟಕದಲ್ಲಿ ಬಣ್ಣಗಳ ಹಬ್ಬ “ಹೋಳಿ” ಆಚರಣೆಗೆ ಸಿದ್ಧವಾಗುತ್ತಿದ್ದು, ಯುವಕರ ಪಾಲಿಗಂತೂ ಇದೊಂದು ಮೋಜು-ಮಸ್ತಿಯ ಹಬ್ಬವಾದರೆ.. ಇನ್ನೂ ಕೆಲವರಿಗೆ ಸಂಭ್ರಮ-ಸಂಪ್ರದಾಯಗಳನ್ನೊಳಗೊಂಡ ಹಬ್ಬವಾಗಿದೆ. ಹೋಳಿ ಹಬ್ಬವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತೆ, ಬೃಹತ್ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಗಳ ಮೂಲಕ ಈ ಹಬ್ಬವನ್ನು ಸಂಭ್ರಮಿಸಲಾಗುತ್ತದೆ.

ಕರ್ನಾಟಕ ಸೇರಿದಂತೆ ಭಾರತದ ಅನೇಕ ಪ್ರದೇಶಗಳಲ್ಲಿ “ಹೋಳಿಕಾ ದಹನ್” ಮತ್ತು “ರಂಗ್ವಾಲಿ ಹೋಳಿ” ಎಂದು ಹೋಳಿಯನ್ನು ಎರಡು ದಿನ ಆಚರಿಸಲಾಗುತ್ತದೆ. ಈ ಬಾರಿಯು ಮಾರ್ಚ್ 3 ಮತ್ತು 4 ರಂದು ಆಚರಿಸಲಾಗುತ್ತದೆ. ಮೊದಲ ದಿನವನ್ನು ಹೋಳಿಕಾ (ಕಾಮನದಹನ) ದಹನ ಆಚರಣೆ ನಡೆಯುತ್ತದೆ. ಇದನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆಚರಿಸುವ ಪದ್ಧತಿಯೂ ಜಾರಿಯಲ್ಲಿದೆ. ಈ ಸಮಯದಲ್ಲಿ ಹಬ್ಬವನ್ನು ಆಚರಿಸುವ ಜನರು ಕಾಮನ ಪ್ರತಿಕೃತಿ ಮಾಡಿ ಬಳಿಕ ಅದನ್ನು ಸುಟ್ಟು ಓಕಳಿ ಆಡುತ್ತಾರೆ.
ಹೋಳಿಯ ಎರಡನೇ ದಿನ, ರಂಗ್ವಾಲಿ ಹೋಳಿ ಅಥವಾ ಧುಲಂಡಿ ಎಂಬ ಆಚರಿಸಲಾಗುತ್ತದೆ. ಒಣ ಗುಲಾಲ್, ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಇದು ಹೋಳಿಯ ಮುಖ್ಯ ದಿನವಾಗಿದೆ. ಕರ್ನಾಟಕ ಸೇರಿ ಅದೆಷ್ಟೋ ಕಡೆಗೆ ಮಾರ್ಚ್ 4 ರಂದು ಬಣ್ಣ ಹಚ್ಚಿ ಹೋಳಿ ಆಚರಣೆ ನಡೆಯಲಿದೆ.

ಹೋಳಿ ಹಬ್ಬದ ಹಿಂದೆ, ಹಿಂದೂ ಪೌರಾಣಿಕವಾಗಿ ದಂತಕಥೆಯನ್ನೂ ಹೊಂದಿದೆ, ಅಲ್ಲಿ ಹಿರಣ್ಯಕಶ್ಯಪು ತನ್ನ ಮಗ ಪ್ರಹ್ಲಾದನನ್ನು ತನ್ನ ಸಹೋದರಿ ಹೋಳಿಕಾಳೊಂದಿಗೆ ಜೀವಂತವಾಗಿ ಸುಡಲು ಪ್ರಯತ್ನಿಸಿದನು. ಆ ವೇಳೆ ಪ್ರಹ್ಲಾದನು ಬೆಂಕಿಯಿಂದ ಬದುಕುಳಿಯುತ್ತಾನೆ. ಅವನ ಸಹೋದರಿ ಹೋಳಿಕಾ ಸುಟ್ಟುಹೋಗುತ್ತಾಳೆ. ಅಲ್ಲಿಂದ ಅದನ್ನು ಆಧ್ಯಾತ್ಮಿಕವಾಗಿ ಹಬ್ಬದಾಚರಣೆಯಾಗಿ ಆಚರಿಸಿಕೊಂಡು ಬರಲಾಗಿದೆ. “ಹೋಳಿಕಾ ದಹನ್” ವೇಳೆ ದೀಪೋತ್ಸವ ಬೆಳಗಿಸಲಾಗುತ್ತದೆ. ಇದು ಭಕ್ತಿ ಮತ್ತು ನ್ಯಾಯದ ವಿಜಯದ ಸಂಕೇತವಾಗಿದೆ.
ಪಂಚಾಂಗದ ಪ್ರಕಾರ ಫೆಬ್ರವರಿ ಅಂತ್ಯ ಮತ್ತು ಮಾರ್ಚ್ ಮಧ್ಯದ ನಡುವೆ ಫಾಲ್ಗುಣದ ಪೂರ್ಣಿಮೆಯ (ಹುಣ್ಣಿಮೆಯ ದಿನ) ಸಂಜೆಯಿಂದ ಹೋಳಿಯನ್ನು ಆಚರಿಸಲಾಗುತ್ತದೆ. ಸದರಿ ವರ್ಷ 2026ರ ಮಾರ್ಚ್ 3ರಂದು ಮಂಗಳವಾರ ಹೋಳಿಕಾ ದಹನ ಆಚರಿಸಲಾಗುತ್ತದೆ. ಮರು ದಿನ ಮಾರ್ಚ್ 4ರಂದು ಬುಧವಾರ ರಂಗ್ವಾಲಿ ಹೋಳಿ ಆಚರಿಸಲಾಗುತ್ತದೆ. ಈ ಎರಡು ದಿನವು ಬಹುತೇಕ ಕಡೆಗಳಲ್ಲಿ ಗುಲಾಲ್(ಪುಡಿ ಬಣ್ಣ) ಪರಸ್ಪರ ಹಚ್ಚಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಲಾಗುತ್ತದೆ.