ಇರಾನ್ ಅಧಿಪತ್ಯದ ಪತನ: ಖಮೇನಿ ಬೆನ್ನಲ್ಲೇ ನೂತನ ಸುಪ್ರೀಂ ಲೀಡರ್‌ ಅರೆಫಿ ಕೂಡ ಬಲಿ?

ಟೆಹ್ರಾನ್:‌ ಮಧ್ಯಪ್ರಾಚ್ಯದಲ್ಲಿ ಜಾಗತಿಕ ಇತಿಹಾಸವೇ ನಡುಗುವಂತಹ ಮಹಾದುರಂತವೊಂದು ಸಂಭವಿಸಿದೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಜಂಟಿ ಬಾಂಬ್ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯಾದ ಬೆನ್ನಲ್ಲೇ, ಆ ದೇಶದ ಇಡೀ ನಾಯಕತ್ವದ ಸರಣಿಯೇ ಬಾಂಬ್ ಮಳೆಗೆ ಬಲಿಯಾಗಿದೆ ಎಂಬ ಆತಂಕಕಾರಿ ವರದಿಗಳು ಹೊರಬರುತ್ತಿವೆ.

ಖಮೇನಿ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಲೀಡರ್ ಆಗಿ ನೇಮಕಗೊಂಡಿದ್ದ ಆಯತೊಲ್ಲಾ ಅಲಿರೆಜಾ ಅರೆಫಿ ಕೂಡ ದಾಳಿಗೆ ಬಲಿಯಾಗಿದ್ದಾರೆ ಎಂಬ ಅಸ್ಪಷ್ಟ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇರಾನ್‌ನ ಆಡಳಿತ ಯಂತ್ರವು ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಈ ಕುರಿತಂತೆ ಇಂಡಿಯಾ.ಕಾಂ ವರದಿ ಮಾಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಭೀಕರ ಸತ್ಯವನ್ನು ಬಹಿರಂಗಪಡಿಸಿದ್ದು, ಇರಾನ್‌ನಲ್ಲಿ ಅಧಿಕಾರಕ್ಕೆ ಬರಬಹುದಾಗಿದ್ದ ಪ್ರತಿಯೊಬ್ಬ ಪ್ರಮುಖ ವಾರಸುದಾರನನ್ನು ಅಮೆರಿಕದ ಕ್ಷಿಪಣಿಗಳು ಸುಟ್ಟುಹಾಕಿವೆ ಎಂದು ಪ್ರತಿಪಾದಿಸಿದ್ದಾರೆ. “ದಾಳಿಯು ಎಷ್ಟು ಯಶಸ್ವಿಯಾಗಿದೆ ಎಂದರೆ, ನಾವು ಯಾರನ್ನು ಉತ್ತರಾಧಿಕಾರಿಗಳು ಎಂದು ಗುರುತಿಸಿದ್ದೇವೋ ಅವರೆಲ್ಲರೂ ಈಗ ಸತ್ತಿದ್ದಾರೆ; ಎರಡನೇ ಮತ್ತು ಮೂರನೇ ಹಂತದ ನಾಯಕರೂ ಉಳಿದಿಲ್ಲ” ಎನ್ನುವ ಟ್ರಂಪ್ ಅವರ ಹೇಳಿಕೆಯು ಇರಾನ್ ದೇಶವು ಈಗ ಅಕ್ಷರಶಃ ʻನಾಯಕರಿಲ್ಲದ ನಾಡು’ ಆಗಿ ಬದಲಾಗಿರುವುದನ್ನು ಸೂಚಿಸುತ್ತಿದೆ.

ಈ ಮಹಾ ವಿನಾಶಕಾರಿ ದಾಳಿಯಲ್ಲಿ ಇರಾನ್‌ನ ಪ್ರಭಾವಿ ಸೇನಾಪಡೆ ಐಆರ್‌ಜಿಸಿ (IRGC) ಕಮಾಂಡರ್ ಮೊಹಮ್ಮದ್ ಪಕ್ಪೋರ್ ಮತ್ತು ಖಮೇನಿ ಅವರ ಆಪ್ತ ಸಲಹೆಗಾರ ಅಲಿ ಶಮ್ಖಾನಿ ಸೇರಿದಂತೆ ಹಲವು ಉನ್ನತ ಮಟ್ಟದ ಮಿಲಿಟರಿ ಅಧಿಕಾರಿಗಳು ಸಾವನ್ನಪ್ಪಿರುವುದು ಈಗ ದೃಢಪಟ್ಟಿದೆ. ಇರಾನ್‌ನ ಶಕ್ತಿ ಕೇಂದ್ರವಾದ ತೆಹ್ರಾನ್‌ನ ಹೃದಯಭಾಗದಲ್ಲಿರುವ ಖಮೇನಿ ಅವರ ನಿವಾಸವನ್ನೇ ಗುರಿಯಾಗಿಸಿ ನಡೆಸಿದ ಈ ಕ್ಷಿಪಣಿ ದಾಳಿಯು ಇರಾನ್‌ನ ಇಡೀ ರಕ್ಷಣಾ ವ್ಯವಸ್ಥೆಯನ್ನು ಮಕಾಡೆ ಮಲಗಿಸಿದೆ.

error: Content is protected !!