ಬೆಂಗಳೂರು: ನವೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ಮಹಾಕ್ರಾಂತಿಯಾಗಲಿದೆ ಎನ್ನುವ ಚರ್ಚೆ ಕೈ ಪಾಳಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸಿದ್ದರಾಮಯ್ಯ ಸಂಪುಟದ ಬರೋಬ್ಬರಿ 15 ಮಂತ್ರಿಗಳಿಗೆ ಸಂಪುಟದಿಂದ ಕೊಕ್ ಸಿಗಲಿದೆ. ಇನ್ನೂ 15 ಜನ ಹಿರಿಯ ಶಾಸಕರು ಹಾಗೂ ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಮುಂದಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನವೆಂಬರ್‌ಗೆ ಎರಡೂವರೆ ವರ್ಷ ಪೂರೈಸುತ್ತಿದ್ದು, ಸಿದ್ದು ಸಂಪುಟಕ್ಕೆ ಮೇಜರ್ ಸರ್ಜರಿಯಾಗಲಿದೆ. ಒಂದು ಮೂಲದ ಪ್ರಕಾರ ಮುಖ್ಯಮಂತ್ರಿ ಸ್ಥಾನವೂ ಬದಲಾವಣೆಯಾಗಲಿದ್ದು, ಡಿಕೆಶಿ ಸಿಎಂ ಆಗುವ ಛಾನ್ಸ್ ಇದೆ ಎನ್ನುವ ಗುಸುಗುಸು ಕೇಳಿಬರುತ್ತಿದೆ.
ಈ ಬಾರಿ ಸ್ಪೀಕರ್ ಯು.ಟಿ. ಖಾದರ್ ಸಿದ್ದು ಮಂತ್ರಿ ಮಂಡಲದಲ್ಲಿ ಸಚಿವ ಸ್ಥಾನ ಪಡೆಯಲಿದ್ದು, ಸ್ಪೀಕರ್ ಸ್ಥಾನ ಹೊಸಬರ ಪಾಲಾಗಲಿದೆ. ಅದೇ ರೀತಿ ಸಿದ್ದು ಸಂಪುಟ ಸೇರಲು ತುದಿಗಾಲಲ್ಲಿ ನಿಂತಿರುವ ಬಿ.ಕೆ.ಹರಿಪ್ರಸಾದ್‌ಗೆ ಛಾನ್ಸ್ ಸಿಗುವ ಸಾಧ್ಯತೆ ಇದೆ.
ಇನ್ನೂ ಬಿಹಾರದ ಚುನಾವಣೆ ಮುಗಿಯುತ್ತಿದ್ದಂತೆಯೇ ಕರ್ನಾಟಕದ ರಾಜಕೀಯದಲ್ಲಿ ಮಹಾ ಕ್ರಾಂತಿಯೊಂದು ನಡೆಯಲಿದ್ದು, ಈಗಾಗಲೇ ಸಚಿವರಾಗಿರುವ ಮಿಕಗಳಿಗೆ ಢವಢವ ಆರಂಭವಾಗಿದೆ. ನವೆಂಬರ್ ಎರಡನೇ ವಾರದಲ್ಲಿ, ರಾಜ್ಯದ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದು, ಅವರಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆ 15ಕ್ಕೂ ಹೆಚ್ಚು ಹಾಲಿ ಶಾಸಕರು ಮಾಜಿಯಾಗಲಿದ್ದಾರೆ. ಸಿದ್ದು ಸಂಪುಟದಿಂದ ಕಿಕ್ ಔಟ್ ಆಗುವವರಲ್ಲಿ ಘಟಾನುಘಟಿಗಳೇ ಇದ್ದಾರೆ ಎನ್ನಲಾಗುತ್ತಿದೆ.
ಅನುದಾನ ಸಾಕಾಗುತ್ತಿಲ್ಲ ಎಂದು ಸಿದ್ದು ವಿರುದ್ಧ ಗುಟುರ್ ಹಾಕುತ್ತಿರುವ ಹಾಲಿ ಸಚಿವರು ಮನೆಗೆ ಹೋಗುವುದು ಶತಃಸಿದ್ಧ ಎನ್ನಲಾಗುತ್ತಿದೆ. ಇಂಥವರನ್ನು ʻಹೊಸಬರಿಗೆ ಅವಕಾಶʼ ಎಂಬ ನೆಲೆಯಲ್ಲಿ ಗೌರವಯುತವಾಗಿ ಬೀಳ್ಕೊಟ್ಟು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಹಾಗೂ ಅವರನ್ನು ಪಕ್ಷದ ಕೆಲಸಗಳಿಗೆ ಬಳಸುವುದು ನವೆಂಬರ್ ಕ್ರಾಂತಿಯ ಮೇಜರ್ ಟ್ವಿಸ್ಟ್!.
ನೂತನ ಪಟ್ಟಿಯಲ್ಲಿ ಯು.ಟಿ. ಖಾದರ್, ಬಿ.ಕೆ.ಹರಿಪ್ರಸಾದ್, ಆರ್.ವಿ.ದೇಶಪಾಂಡೆ, ಬಸವರಾಜ ರಾಯರೆಡ್ಡಿ, ಲಕ್ಷ್ಮಣ ಸವದಿ ಮತ್ತಿತರರು ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಸಂಪುಟ ಸರ್ಜರಿಯಿಂದ ನವೆಂಬರ್‌ನಲ್ಲಿ ಮಹಾಕ್ರಾಂತಿಯಾಗುತ್ತಾ ಅಥವಾ ಸರ್ಕಾರವೇ ಪತನವಾಗುತ್ತಾ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.