ಉಡುಪಿ: ಆಟವಾಡುವ ಉತ್ಸಾಹ ಇದ್ದರೂ, ದೇಹ ಸ್ಪಂದಿಸುವುದಿಲ್ಲ. ಹೀಗಾಗಿ ಭಾರವಾದ ಹೃದಯದಿಂದ ಬ್ಯಾಡ್ಮಿಂಟನ್ ಆಟ ತೊರೆದಿದ್ದೇನೆ. ದೈಹಿಕ ಕ್ಷಮತೆಯ ಕಾರಣಕ್ಕೆ ಇದು ಅನಿವಾರ್ಯವಾಗಿತ್ತು ಎಂದು ಸೈನಾ ನೆಹ್ವಾಲ್ ಭಾವುಕ ಹೇಳಿಕೆ ನೀಡಿದ್ದಾರೆ. ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ. ನನಗೆ ನರೇಂದ್ರ ಮೋದಿಯವರ ಚಿಂತನೆ ತುಂಬಾ ಇಷ್ಟ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.
ಉಡುಪಿಯಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ತಾರೆ, ಸುದ್ದಿಗೋಷ್ಠಿ ನಡೆಸಿ ತಾನು ಬ್ಯಾಡ್ಮಿಂಟನ್ ತೊರೆದಿರುವುದನ್ನು ದೃಢಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಕೋಚಿಂಗ್ ನೀಡುವ ಬಗ್ಗೆ ನನಗೆ ಆಸಕ್ತಿ ಇಲ್ಲ ಆದರೆ ಹೈದರಾಬಾದ್ ನಲ್ಲಿ ಬ್ಯಾಡ್ಮಿಂಟನ್ ತರಬೇತಿ ನೀಡುವ ಅತ್ಯುತ್ತಮ ಅಕಾಡೆಮಿ ಇದೆ. ನನ್ನ ಪತಿ ಗೋಪಿ ಸರ್ ಗೆ ಈಗ ಸಹಾಯ ಮಾಡುತ್ತಿದ್ದಾರೆ. ಕೋಚಿಂಗ್ ತುಂಬಾ ಡಿಫಿಕಲ್ಟ್. ಆಡುವುದಕ್ಕಿಂತಲೂ ಕೋಚಿಂಗ್ ಗೆ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತೆ. ಹತ್ತು, ಹದಿನೈದು ಗಂಟೆ ನಿಂತುಕೊಂಡು ಬೊಬ್ಬೆ ಹೊಡೆಯುತ್ತಾ ತರಬೇತಿ ನೀಡುವುದು ಸುಲಭವಲ್ಲ ಎಂದರು.
ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮಕ್ಕಳಿಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದ್ದೇನೆ. ಬ್ಯಾಡ್ಮಿಂಟನ್ ಮಾತ್ರವಲ್ಲ ಎಲ್ಲಾ ಬಗೆಯ ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು. ಭವಿಷ್ಯದಲ್ಲಿ ಅಗತ್ಯ ಎನಿಸಿದರೆ ಮಾತ್ರ ಅಕಾಡೆಮಿಯಲ್ಲಿ ತೊಡಗಿಸಿಕೊಳ್ಳುವೆ ಎಂದು ಹೇಳಿದರು.
ಸದ್ಯ ಮಕ್ಕಳನ್ನು ಮೋಟಿವೇಟ್ ಮಾಡುವುದರಲ್ಲಿ ನನಗೆ ಸಂತೋಷ ಇದೆ. ಸಾಮಾಜಿಕ ಜಾಲತಾಣ ಬಿಟ್ಟು ಮಕ್ಕಳು ಮೈದಾನದತ್ತ ಬರಬೇಕು. ಹಾಗಾಗಿ ಅವರನ್ನು ಮೋಟಿವೇಟ್ ಮಾಡುವುದರಲ್ಲಿ ನನಗೆ ಸಂತೋಷವಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ರಾಜಕೀಯ ಪ್ರವೇಶದ ಕುರಿತ ಪ್ರಶ್ನೆಗೆ ಉತ್ತರಿಸಿದ ನೆಹ್ವಾಲ್, ನನಗೆ ರಾಜಕೀಯದಲ್ಲಿ ಯಾವುದೇ ಆಸಕ್ತಿ ಇಲ್ಲ. ನನಗೆ ನರೇಂದ್ರ ಮೋದಿಯವರ ಚಿಂತನೆ ತುಂಬಾ ಇಷ್ಟ. ರಾಜಕೀಯ ನಾಯಕರಲ್ಲಿ ನರೇಂದ್ರ ಮೋದಿ ನನ್ನ ನೆಚ್ಚಿನ ಮುಖಂಡ ಎಂದರು.
ಕಳೆದ 25 ವರ್ಷಗಳಿಂದ ಮನೆ, ಸ್ನೇಹಿತರು, ಫುಡ್ ಎಲ್ಲವನ್ನು ಬಿಟ್ಟು ಕ್ರೀಡಾಕ್ಷೇತ್ರದಲ್ಲಿದ್ದೇನೆ. ತುಂಬಾ ಒತ್ತಡದ ಜೀವನ ನಡೆಸಿದ್ದೇನೆ. ಎಲ್ಲಾ ಕ್ಷೇತ್ರಗಳಲ್ಲೂ ಒತ್ತಡ ಇರುತ್ತೆ. ಪ್ರಕಾಶ್ ಪಡುಕೋಣೆ ಓರ್ವ ಲೆಜೆಂಡ್. ಅವರ ತವರೂರಿಗೆ ಬಂದು ಸಂತೋಷವಾಗಿದೆ. ಅವರಿಂದ ಪ್ರೇರಣೆ ಪಡೆದು ನಾವು ಆಟವಾಡಿದ್ದೇವೆ. ಪ್ರಕಾಶ್ ಪಡುಕೋಣೆ ರಿಯಲ್ ಸ್ಟಾರ್ ಅವರ ಬಗ್ಗೆ ಹೆಮ್ಮೆ ಇದೆ. ಈ ಭಾಗದಿಂದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿರುವ ಚೀರಾಗ್ ಶೆಟ್ಟಿ ಹಾಗೂ ಸಾತ್ವಿಕ್ ಶೆಟ್ಟಿ ಭರವಸೆಯ ಆಟಗಾರರು ಎಂದು ಹೇಳಿದರು.