ಮಂಗಳೂರು: ಮಣೇಲ್ ದೇವರಗುಡ್ಡೆ ಕ್ಷೇತ್ರ ಪುನರ್‌ನಿರ್ಮಾಣವಾಗುತ್ತಿರುವ ಹಿನ್ನೆಲೆ ರಸ್ತೆ ಅಭಿವೃದ್ಧಿ ಹಾಗೂ ತಡೆಗೋಡೆ ನಿರ್ಮಾಣಕ್ಕೆ 10 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಕ್ಷೇತ್ರ ನಿರ್ಮಾಣಕ್ಕೆ ಮುಂದಿನ ಬಾರಿ ಅನುದಾನ ಬಿಡುಗಡೆ ಮಾಡಲಿದ್ದು, ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಪಕ್ಷಬೇಧ ಮರೆತು, ನಾವೆಲ್ಲರೂ ಹಿಂದೂ ಎಂಬ ನೆಲೆಯಲ್ಲಿ ದೇವಸ್ಥಾನ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.
ಭಾನುವಾರ ಮಳಲಿ ದೇವರಗುಡ್ಡೆಯ ಶ್ರೀಸೂರ್ಯನಾರಾಯಣ ದೇವಸ್ಥಾನ ಪುನರ್‌ನಿರ್ಮಾಣದ ಪ್ರಯುಕ್ತ ಬಾಲಾಲಯದ ಮುಂದೆ ನಡೆದ ಜೀರ್ಣೋದ್ಧಾರ ಸಮಿತಿ ರಚನೆ ಕುರಿತ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇವರಗುಡ್ಡೆ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿರುವ ಹದಿನಾರನೇ ಕ್ಷೇತ್ರ. ಸದ್ಯದಲ್ಲೇ ಇನ್ನೆರಡು ಕ್ಷೇತ್ರಗಳು ಜೀರ್ಣೋದ್ಧಾರವಾಗಲಿದ್ದು, ೧೮ ಕ್ಷೇತ್ರಗಳ ಸೇವೆಯ ಅವಕಾಶ ಸಿಕ್ಕಂತಾಗುತ್ತದೆ ಎಂದು ಧನ್ಯತೆ ವ್ಯಕ್ತಪಡಿಸಿದರು.
ದೇವಸ್ಥಾನಕ್ಕೆ ನೀಡುವ ಅನುದಾನದ ಕುರಿತಂತೆ ಈಗಲೇ ಘೋಷಣೆ ಮಾಡಿದ್ರೆ ಮುಂದಿನ ಮುಂದೆ ಜಾಸ್ತಿ ಕೊಡಲು ಆಗುವುದಿಲ್ಲ. ನನ್ನ ವೈಯಕ್ತಿಕ ನೆಲೆಯಲ್ಲಿ ಸಹಕಾರ ನೀಡಲಾಗುವುದು. ಆದರೆ ನಾವು ನಿಮಿತ್ತ ಮಾತ್ರ, ದೇವರೇ ತಮ್ಮ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಾರೆ ಎನ್ನುವುದು ಸತ್ಯ ಎಂದು ಭರತ್ ವಿನಂತಿಸಿದರು.
ಮಾಜಿ ಸಚಿವ ರಮನಾಥ ರೈ ಮಾತನಾಡಿ, ಮೊದಲು ಮಳಲಿ ಬಂಟ್ವಾಳ, ಪೊಳಲಿ ವಿಟ್ಲ ಕ್ಷೇತ್ರದಲ್ಲಿ ಇತ್ತು. ಈ ಊರಿನ ಪ್ರೀತಿಯಿಂದ ಮಂತ್ರಿಯೂ ಆದೆ. ಈಗ ವಿಧಾನ ಸಭಾ ಕ್ಷೇತ್ರ ಮರುವಿಂಗಡನೆಯಾಗಿ ಮಳಲಿ ಸುರತ್ಕಲ್, ಪೊಳಲಿ ಬಂಟ್ವಾಳ ಕ್ಷೇತ್ರಕ್ಕೆ ಹೋಯಿತು. ಈಗ ನನ್ನ ಕಾರ್ಯಕ್ಷೇತ್ರ ಬಂಟ್ವಾಳವಾದರೂ ಇಲ್ಲಿನ ಜನರು ಇಂದಿಗೂ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ನಿಮ್ಮ ಹೃದಯ ಶ್ರೀಮಂತಿಕೆಗೆ ನಾನು ಅಭಾರಿ. ನನಗೆ ಈ ಮಣ್ಣಿನ ಋಣ ಇರುವುದರಿಂದಲೇ ಸೂರ್ಯನಾರಾಯಣ ಕ್ಷೇತ್ರದ ಸೇವೆ ಮಾಡಲು ಅವಕಾಶ ಸಿಕ್ಕಿತ್ತು. ಮೊದಲು ಪೊಳಲಿ ಕ್ಷೇತ್ರದ ಜೀರ್ಣೋದ್ಧಾರದ ಸಂದರ್ಭ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಭಾಗ್ಯವೂ ಸಿಕ್ಕಿತ್ತು ಎಂದು ಸ್ಮರಿಸಿದರು.
ಮಹೇಶ್ ಶೆಟ್ಟಿ ಮೊಗರು ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಇತಿಹಾಸವನ್ನು ವಿವರಿಸಿದರು. ಮತ್ತೋರ್ವ ಅತಿಥಿ, ಹಿರಿಯರಾದ ಅಣ್ಣಯ್ಯ ಮೇಷ್ಟ್ರು ಒಂದೂವರೆ ವರ್ಷದೊಳಗಡೆ ದೇವಸ್ಥಾನದ ಬ್ರಹ್ಮಕಲಶ ನಡೆಯಲಿ ಎಂದು ಸಂಕಲ್ಪಿಸಿ ದೇವರ ಅನುಗ್ರಹ ಪಡೆಯೋಣ ಎಂದು ಪ್ರಾರ್ಥಿಸಿದರು.
ಊರಿನ ಗ್ರಾಮಸ್ಥರ ಸರ್ವಾನುಮತದೊಂದಿಗೆ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶೇಖರ್ ಜೋಗಿ ಮಳಲಿ ಮಟ್ಟಿ, ಕಾರ್ಯಾಧ್ಯಕ್ಷರಾಗಿ ಭಾಸ್ಕರ್ ಭಟ್ ಗಂಜಿಮಠ, ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜ್ ನಾರಳ, ಜೊತೆ ಕಾರ್ಯದರ್ಶಿಗಳಾಗಿ ವಿಜಯ್ ಕಾಜಿಲ, ಎಕನಾಥ್ ಕರ್ಕೇರ ಮಳಲಿ, ವಿಜಯ್ ನಾರ್ಲ ಪದವು, ಕೋಶಾಧಿಕಾರಿಯಾಗಿ ಕೃಷ್ಣಕಾಂತ್ ಶೇಣವ ನಾರಳಗುತ್ತು, ಜೊತೆ ಕೋಶಾಧಿಕಾರಿ ವಿಶ್ವನಾಥ್ ಮಳಲಿ ಸೇರಿದಂತೆ ಸಂಪೂರ್ಣ ಸಮಿತಿಯನ್ನು ರಚಿಸಲಾಯಿತು.
ವೇದಿಕೆಯಲ್ಲಿ ಚಂದ್ರಹಾಸ ಶೆಟ್ಟಿ ನಾರಳ, ವಾಮನ್ ನಾಯಕ್ ಪೊಳಲಿ, ಮಹೇಶ್ ಶೆಟ್ಟಿ ಮೊಗರು, ಶೇಖರ್ ಜೋಗಿ, ಅಕ್ಷಯ ಕುಮಾರ್ ಮಣೇಲ್, ಉಲ್ಲಾಸ್ ರೈ, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಗಂಗಾಧರ ಜೋಗಿ, ಪ್ರಶಾಂತ್ ಕುಮಾರ್ ಕಟ್ಟೆಮಾರ್, ಉದಯ್ ಆಳ್ವಾ ಉಳಿಪಾಡಿಗುತ್ತು, ಚಂದ್ರಹಾಸ್ ಪಳ್ಳಿಪಾಡಿ ಮತ್ತಿತರರು ಉಪಸ್ಥಿತರಿದ್ದರು. ಶಿವರಾಜ್ ನಾರಳ ನಿರೂಪಿಸಿ, ಧನ್ಯವಾದವಿತ್ತರು.