ಅ.15ರಂದು ಮಂಜೇಶ್ವರದಲ್ಲಿ ‘ಪುವೆಂಪು ನೆನಪುʼ

ಮಂಗಳೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು — ಡಾ. ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ (ಪುವೆಂಪು) ಪ್ರತಿಷ್ಠಾನ, ಕಾಸರಗೋಡು ಹಾಗೂ ಕೇರಳ ತುಳು ಅಕಾಡೆಮಿ, ಮಂಜೇಶ್ವರ (ಕೇರಳ ಸರ್ಕಾರ) ಇವುಗಳ ಸಂಯುಕ್ತ ಆಶ್ರಯದಲ್ಲಿ “ಪುವೆಂಪು ನೆನಪು–2025” ಕಾರ್ಯಕ್ರಮವು ಅ.15, 2025ರಂದು (ಬುಧವಾರ) ಬೆಳಿಗ್ಗೆ 9 ಗಂಟೆಯಿಂದ ದುರ್ಗಿಪಳ್ಳದ ಕೇರಳ ತುಳು ಅಕಾಡೆಮಿ ಸಭಾಂಗಣದಲ್ಲಿ ಜರುಗಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ತಿಳಿಸಿದರು.

ಕಾಸರಗೋಡಿನ ಅನನ್ಯ ರತ್ನ, ಚತುರ್ಭಾಷಾ ವಿದ್ವಾಂಸ ದಿ. ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ ಅವರು ವಿದ್ವಾಂಸ, ಸಾಹಿತಿ, ಕವಿ, ಶಿಕ್ಷಕ, ಯಕ್ಷಗಾನ ನಿರೂಪಕ, ವಾಗ್ಮಿ, ನಟ ಹಾಗೂ ಸಂಶೋಧಕರಾಗಿ ಹಲಮುಖಿ ಪ್ರತಿಭೆಯೊಂದಿಗೆ ಖ್ಯಾತರಾಗಿದ್ದರು. ತುಳು ಭಾಷೆಗೆ ಸ್ವಂತ ಲಿಪಿ ಇದೆ ಎಂಬುದನ್ನು ಶಾಸ್ತ್ರೀಯವಾಗಿ ಸಾಬೀತುಪಡಿಸಿದವರು ಎಂಬ ಹೆಗ್ಗಳಿಕೆ ಅವರಿಗೆ ಸೇರಿದೆ. ತುಳು, ಕನ್ನಡ, ಮಲಯಾಳಂ ಮತ್ತು ಸಂಸ್ಕೃತ ಭಾಷೆಗಳಲ್ಲಿ ಹಲವು ಕೃತಿಗಳನ್ನು ರಚಿಸಿದ್ದ ಈ ಮೇಧಾವಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ. ಕೇರಳ ತುಳು ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಅವರ 89ನೇ ಜನ್ಮದಿನದ ಅಂಗವಾಗಿ ನಡೆಯಲಿರುವ ಈ ಸ್ಮರಣೆ ಕಾರ್ಯಕ್ರಮವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಹಮ್ಮಿಕೊಂಡಿದೆ ಎಂದರು.

ಬೆಳಿಗ್ಗೆ 9.00ರಿಂದ 10.00ರವರೆಗೆ ಭಾವಗಾನ ಮತ್ತು ನೃತ್ಯ ವೈಭವ, 10.00ರಿಂದ 12.00ರವರೆಗೆ ಉದ್ಘಾಟನೆ ಮತ್ತು ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ ಎಂದು ಪ್ರದೀಪ್‌ ಹೇಳಿದರು.

ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಲಿದ್ದು, ಸಮಾರಂಭಕ್ಕೆ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನ ಪರಿಷತ್ತಿನ ಮಾನ್ಯ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಉದ್ಘಾಟಿಸಲಿದ್ದು, ಮಂಗಳೂರು ಬೆಸೆಂಟ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ನುಡಿನಮನ ಸಲ್ಲಿಸುವರು.

ಪುವೆಂಪು ಪ್ರಶಸ್ತಿ 2025 – ಪ್ರೊ. ಎಸ್.ಜಿ. ಸಿದ್ದರಾಮಯ್ಯರಿಗೆ

2025ನೇ ಸಾಲಿನ ಪುವೆಂಪು ಪ್ರಶಸ್ತಿಗೆ ಕನ್ನಡ ನಾಡು ಕಂಡ ಅಪೂರ್ವ ಸಾಹಿತಿ, ಚಿಂತಕ ಹಾಗೂ ವಿಮರ್ಶಕ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಮೂಲತಃ ತುಮಕೂರಿನವರಾದ ಅವರು ಶಿಕ್ಷಣ ಮತ್ತು ವೃತ್ತಿ ಜೀವನದ ಬಹುಭಾಗವನ್ನು ಬೆಂಗಳೂರಿನಲ್ಲಿ ಕಳೆದಿದ್ದು, ರಾಜ್ಯದ ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ಪ್ರಕಟಿಸಿದ ವಿಶೇಷ ಸಂಪುಟಗಳು ಹಾಗೂ ಪುಸ್ತಕ ಮಳಿಗೆಗಳ ಸ್ಥಾಪನೆ ಓದು ಹವ್ಯಾಸವನ್ನು ಉತ್ತೇಜಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರಾಜ್ಯದಾದ್ಯಂತ ಸಂಚರಿಸಿ ಆಡಳಿತ ಮತ್ತು ವ್ಯವಹಾರಗಳಲ್ಲಿ ಕನ್ನಡ ಬಳಕೆಗೆ ಪ್ರೋತ್ಸಾಹ ನೀಡಿದ್ದಾರೆ.

ಕಾವ್ಯ, ವಿಮರ್ಶೆ, ನಾಟಕ, ಅನುಭವಕಥನ, ಜಾನಪದ, ಪ್ರವಾಸಕಥನ, ಆತ್ಮಕತೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಅವರು ಅನೆಕ ಕೃತಿಗಳನ್ನು ರಚಿಸಿದ್ದು, ಪು.ತಿ.ನ. ಕಾವ್ಯ ಪ್ರಶಸ್ತಿ, ಡಾ. ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ, ಮಾಸ್ತಿ ಕಾವ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆ.

ಸಾಹಿತ್ಯ, ಚಿಂತನೆ ಮತ್ತು ಸಂಶೋಧನೆಯ ಸಮನ್ವಯ ಸಾಧಿಸಿರುವ ಅವರ ಸೃಜನಶೀಲತೆ “ಪುವೆಂಪು ಪ್ರಶಸ್ತಿ 2025” ಆಯ್ಕೆಗೆ ಪಾತ್ರವಾಗಿದ್ದು, ಇದು ಅವರ ಧೀಶಕ್ತಿ ಮತ್ತು ಕ್ರಿಯಾಶಕ್ತಿಗೆ ಸಂದ ಗೌರವವಾಗಿದೆ ಎಂದು ಪ್ರದೀಪ್‌ ಕುಮಾರ್‌ ಕಲ್ಕೂರ ಹೇಳಿದರು.

error: Content is protected !!