ಡಿಎನ್ಎ ಟೆಸ್ಟ್ ವರದಿ ಬರಲಿ ಮದುವೆಗೆ ಪ್ರಯತ್ನಿಸುವ ಎಂದವರೂ ಇಂದು ನಾಪತ್ತೆ..!

ಮಂಗಳೂರು: ಯುವತಿಗೆ ವಂಚಿಸಿ ಮಗು ಭಾಗ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನೇ ಮಗುವಿನ ಅಪ್ಪ ಎಂದು ಡಿಎನ್ಎ ವರದಿಯಲ್ಲಿ ಸಾಬೀತಾಗಿದೆ. ಪ್ರಕರಣವನ್ನು ರಾಜಿಯಲ್ಲಿ ಮುಗಿಸಲು ಯತ್ನಿಸಿದ್ದ ಹೋರಾಟಗಾರರು ಇಂದು ಮರೆಯಾಗಿದ್ದಾರೆ. ಡಿಎನ್ಎ ಟೆಸ್ಟ್ ವರದಿ ಬರಲಿ ಮದುವೆಗೆ ಪ್ರಯತ್ನಿಸುವ ಎಂದವರೂ ಇಂದು ನಾಪತ್ತೆಯಾಗಿದ್ದಾರೆ. ಹೋರಾಟಗಾರರ ಈ ನಡೆ ಸಂತ್ರಸ್ತೆ ಯುವತಿಯ ಪೋಷಕರ ಆಕ್ರೋಶಕ್ಕೂ ಕಾರಣವಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಬಿಜೆಪಿ ಮುಖಂಡ ಪಿ.ಜಿ.ಜಗನ್ನಿವಾಸ ರಾವ್ ಪುತ್ರ ಶ್ರೀಕೃಷ್ಣ. ಜೆ.ರಾವ್ ಯುವತಿಯೋರ್ವಳಿಗೆ ಮದುವೆಯಾಗುವುದಾಗಿ ವಂಚಿಸಿ ಆಕೆಗೆ ಮಗು ಭಾಗ್ಯ ನೀಡಿದ್ದ. ಈ ವಿಚಾರವಾಗಿ ಹಲವು ತರಹದ ಹೋರಾಟಗಾರರು ಸಂತ್ರಸ್ತೆಯ ಪರವಾಗಿ ಹೋರಾಟ ಮಾಡಿದ್ದರು. ಕೆಲವರು ಸಂತ್ರಸ್ತೆಯ ಮನೆಗೆ ತೆರಳಿ ಆರೋಪಿ ಯುವಕನೊಂದಿಗೆ ಯುವತಿಯ ಮದುವೆ ಮಾಡಿಸುವ ಭರವಸೆಯನ್ನೂ ನೀಡಿದ್ದರು. ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ ಯುವಕನ ಮನೆ ಮಂದಿಯ ಮನವೊಲಿಸಿ ಮದುವೆ ಮಾಡಿಸಿಕೊಡುವ ಭರವಸೆ ನೀಡಿದ್ದರು.

ವಂಚನೆ ಆರೋಪದಲ್ಲಿ ಜೈಲು ಪಾಲಾಗಿದ್ದ ಶ್ರೀಕೃಷ್ಣ‌.ಜೆ.ರಾವ್ ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸುವ ಭರವಸೆಯನ್ನೂ ನೀಡಲಾಗಿತ್ತು. ಈ ನಡುವೆ ಮಗುವು ಆರೋಪಿಗೆ ಸೇರಿದ್ದೇ, ಅಲ್ಲವೇ ಎನ್ನುವ ಗೊಂದಲಗಳೂ ಕೆಲವು ಹೋರಾಟಗಾರರಲ್ಲಿ ಮೂಡಿತ್ತು. ಈ ಗೊಂದಲಕ್ಕೂ ಇದೀಗ ಪರಿಹಾರ ದೊರೆತಿದ್ದು, ಶ್ರೀಕೃಷ್ಣನೇ ಮಗುವಿನ ತಂದೆ ಅನ್ನೊದು ಡಿಎನ್ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆದರೆ ಡಿಎನ್ಎ ಪರೀಕ್ಷೆ ಬಂದ ಬಳಿಕ ಸಂತ್ರಸ್ತೆಯ ಪರವಾಗಿ ನಿಂತವರು ಮೌನವಾಗಿದ್ದಾರೆ ಎನ್ನುವ ಆರೋಪಗಳೂ ಕೇಳಿಬಂದಿವೆ.

ಹೆಣ್ಣಿಗೆ ಅನ್ಯಾಯವಾದಾಗ ಎದ್ದು ನಿಲ್ಲುತ್ತಿದ್ದ ಹಿಂದೂಪರ ಸಂಘಟನೆಗಳು ಪುತ್ತೂರಿನ ಈ ಯುವತಿಯ ಪರ ಧ್ವನಿ ಎತ್ತಿಲ್ಲ ಎನ್ನುವ ಆರೋಪವನ್ನೂ ಮೈಮೇಲೆ ಎಳೆದುಕೊಂಡಿದೆ. ದಿನಗಳೆದಂತೆ ಈ ಪ್ರಕರಣ ಜಟಿಲಗೊಳ್ಳುತ್ತಿದ್ದು, ಮುಕ್ತಾಯ ಹೇಗಾಗಲಿದರ ಎನ್ನುವ ಕುತೂಹಲದಲ್ಲಿ ಪುತ್ತೂರಿನ ಜನರಿದ್ದಾರೆ.

error: Content is protected !!