ಕೆರೆಗೆ ಬಿದ್ದು ಯುವಕ ಸಾವು; ಆತ್ಮಹತ್ಯೆ ಶಂಕೆ

ಉಳ್ಳಾಲ: ಕಿನ್ಯಾ ಗ್ರಾಮದ ನಿವಾಸಿ ಗುರುವಾರ(ಅ.9) ಬೆಳಗ್ಗಿನ ಜಾವ ಮನೆ ಸಮೀಪದ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

ವಿಶ್ವನಾಥ್‌ ಶೆಟ್ಟಿ ಅವರ ಪುತ್ರ ಮಿಥುನ್‌ ಶೆಟ್ಟಿ (32) ಸಾವನ್ನಪ್ಪಿದ ಯುವಕ.

ರಾತ್ರಿ ಮಲಗಿದ್ದವರು ಬೆಳಗ್ಗೆ ಕಾಣಿಸದೇ ಇದ್ದಾಗ ಮನೆಮಂದಿ ಹುಡುಕಾಟ ಆರಂಭಿಸಿದರು. ಈ ಸಂದರ್ಭ ಕಿನ್ಯಾ ಗ್ರಾ.ಪಂ. ಕಟ್ಟಡ ಸಮೀಪದ ಪಾದೆ ಎಂಬಲ್ಲಿನ ದೊಡ್ಡ ಕೆರೆಯ ಸಮೀಪ ಚಪ್ಪಲಿಗಳು ಪತ್ತೆಯಾದವು. ಬಳಿಕ ಸ್ಥಳೀಯರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಕೂಡಲೇ ಶೋಧ ಕಾರ್ಯ ಆರಂಭಿಸಿದರು.

ಬೆಳಗ್ಗಿನಿಂದ ಅಪರಾಹ್ನ 3 ಗಂಟೆ ವರೆಗೂ ಗೃಹರಕ್ಷಕ ದಳದ ಪ್ರಸಾದ್‌ ಸುವರ್ಣ, ಸ್ಥಳೀಯರಾದ ಹಸೈನಾರ್‌ ಕಿನ್ಯಾ, ಫಾರುಕ್‌ ಉಳ್ಳಾಲ, ರಝಾಕ್‌ ಕಿನ್ಯಾ, ಅನ್ಸಾರ್‌ ಕಿನ್ಯಾ, ರವೂಫ್‌, ಹೈದರ್‌ ಕಿನ್ಯಾ ನೀರಿನಲ್ಲಿ ಮುಳುಗಿ ಶೋಧ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಅಪರಾಹ್ನ 3 ಗಂಟೆಯ ಸುಮಾರಿಗೆ ಗರುಡಪಾತಾಳಕ್ಕೆ ಹಾಕಿ ಹುಡುಕಿದಾಗ ಮೃತದೇಹ ಅದಕ್ಕೆ ಸಿಲುಕಿಕೊಂಡಿತು. ಈ ನಡುವೆ ಉಡುಪಿಯಿಂದ ಈಜುಪಟು ಈಶ್ವರ ಮಲ್ಪೆ ಅವರನ್ನು ಸಂಪರ್ಕಿಸಲಾಗಿತ್ತು. ಅವರು ತಕ್ಷಣ ಹೊರಟಿದ್ದರು. ಆದರೆ ಮಾರ್ಗಮಧ್ಯೆ ಇರುವಾಗಲೇ ಸ್ಥಳೀಯರಿಗೆ ಮೃತದೇಹ ಪತ್ತೆಯಾಗಿದ್ದರಿಂದ ವಾಪಸಾಗಿದ್ದರು.

ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!