ಬಜ್ಪೆ: ‘ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ದಿ ಕಲಿಸುತ್ತೇನೆ. ಇನ್ಮುಂದೆ ಎಲ್ಲಾ ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ’ ಇದು ಶ್ರೀಕ್ಷೇತ್ರ ಪೆರಾರದ ಬಲವಂಡಿ, ಪಿಲಿಚಂಡಿ ದೈವದ ನುಡಿ. ದೈವಗಳು ಈ ರೀತಿ ನುಡಿ ಕೊಡಲು ಕಾರಣವೂ ಇದೆ.
ಹೊಂಬಾಳೆ ಫಿಲಮ್ಸ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸುತ್ತಿರುವ ‘ಕಾಂತಾರ: ಚಾಪ್ಟರ್ 1’ ದೇಶ ವಿದೇಶಗಳಲ್ಲಿ ಹಿಟ್ ಆಗುತ್ತಿದೆ. ಇದರ ಬೆನ್ನಲ್ಲೇ ಕಾಂತಾರ ಅಭಿಮಾನಿಗಳು ದೈವಗಳಂತೆ ಆವೇಶ ಬರುವಂತೆ ನಟಿಸುವುದು, ದೈವಗಳ ವೇಷ ಹಾಕುವುದು ಇತ್ಯಾದಿ ಅತಿರೇಕದ ವರ್ತನೆಗಳನ್ನು ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ದೈವಾರಾಧಕರು ಮಂಗಳೂರಿನ ಹೊರವಲಯದ ಬಜಪೆ ಸಮೀಪದ ಶ್ರೀಕ್ಷೇತ್ರ ಪೆರಾರದ ಶ್ರೀ ಬ್ರಹ್ಮದೇವರು ಇಷ್ಟದೇವತಾ ಬಲವಂಡಿ ಪಿಲಿಚಂಡಿ ದೈವಸ್ಥಾನದ ದೈವಗಳ ಮೊರೆಹೋಗಿ ಕಾಂತಾರ ಸಿನಿಮಾ ಬಂದ ಬಳಿಕ ದೈವಾರಾಧನೆಗೆ ಅಪಚಾರ ಮಾಡಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ಅಲ್ಲದೆ ದೈವದ ಮುಂದೆ ದೈವಾರಾಧನೆಯ ಅಪಹಾಸ್ಯದ ವಿರುದ್ಧ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ಸಿನಿಮಾದಲ್ಲಿ ದೈವಾರಾಧನೆ ಬಳಕೆ ಬಗ್ಗೆ ದೂರು ಹೇಳಿದ್ದು, ದೈವದ ಆವೇಶವನ್ನು ಅನುಕರಣೆ ಮಾಡುತ್ತಿರುವ ಬಗ್ಗೆ ದೈವರಾಧಕರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಬಲವಂಡಿ, ಪಿಲಿಚಂಡಿ ದೈವಗಳು ‘ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ನಾನೇ ಬುದ್ದಿ ಕಲಿಸುತ್ತೇನೆ. ಇನ್ಮುಂದೆ ಎಲ್ಲಾ ದೈವಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ’ ಎಂದು ನುಡಿ ನೀಡಿದೆ.
‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಸಿನಿಮಾ ನೋಡಿದ ಕೆಲವರು ದೈವದ ಅನುಕರಣೆ ಮಾಡುತ್ತಿದ್ದಾರೆ. ಅಸಲಿಗೆ 2022 ರಲ್ಲಿ ಮೊದಲ ‘ಕಾಂತಾರ’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಇದನ್ನು ರಿಷಬ್ ಶೆಟ್ಟಿ, ಹೊಂಬಾಳೆ ವಿರೋಧಿಸುತ್ತಲೇ ಬಂದಿದ್ದರೂ ಕಡಿವಾಣ ಬಿದ್ದಿರಲಿಲ್ಲ. ಇತ್ತೀಚೆಗೆ ಪೋಸ್ಟ್ ಹಂಚಿಕೊಂಡಿದ್ದ ಹೊಂಬಾಳೆ ಫಿಲಮ್ಸ್, ದೈವದ ಅನುಕರಣೆ ಮಾಡುವುದು ಬೇಡ ಎಂದು ಮನವಿ ಮಾಡಿತ್ತು. ಆದರೂ ಇದು ಮುಂದುವರಿದಿರುವುದು ದೈವಾರಾಧಕರಿಗೆ, ದೈವ ನರ್ತಕರಿಗೆ ಬೇಸರ ಮೂಡಿಸಿದೆ. ಅಲ್ಲದೆ ದೈವಗಳನ್ನು ಹಣ ಮಾಡಲು ಬಳಕೆ ಮಾಡುತ್ತಿರುವುದಕ್ಕೆ ಟೀಕೆ ವ್ಯಕ್ತಪಡಿಸುತ್ತಿದ್ದಾರೆ.