ನವದೆಹಲಿ: ಸಂಯುಕ್ತ ರಾಷ್ಟ್ರ(UN)ದ ನಿರ್ಬಂಧ ಪಟ್ಟಿಯಲ್ಲಿರುವ ಆಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರು ವಾರವಿಡೀ ಭಾರತ ಭೇಟಿಗೆ ಬಂದಿಳಿದಿದ್ದಾರೆ. ಯುಎನ್ ಭದ್ರತಾ ಮಂಡಳಿಯು ಅವರ ಪ್ರಯಾಣಕ್ಕೆ ವಿನಾಯಿತಿ ನೀಡಿದ ನಂತರ ಈ ಭೇಟಿ ಸಾಧ್ಯವಾಗಿದ್ದು, 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಭಾರತದ ಭೇಟಿ ನೀಡುತ್ತಿರುವ ಉನ್ನತ ಮಟ್ಟದ ತಾಲಿಬಾನ್ ನಾಯಕನಾದ ಮುತ್ತಾಕಿಯವರ ಇದು ಮೊದಲ ಭೇಟಿಯಾಗಿದೆ. ಆದರೆ ಈ ಭೇಟಿಯ ಬೆನ್ನಲ್ಲೇ ಧ್ವ ವಿವಾದ ಭುಗಿಲೆದ್ದಿದೆ.
ಮುತ್ತಾಕಿಯವರು ತಮ್ಮ ಭಾರತ ಪ್ರವಾಸದ ವೇಳೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಪ್ರಾದೇಶಿಕ ರಾಜತಾಂತ್ರಿಕತೆಯ ದೃಷ್ಟಿಯಿಂದ ಈ ಭೇಟಿ ಮಹತ್ವದ್ದಾಗಿದ್ದು, ಇಸ್ಲಾಮಾಬಾದ್ ಸೇರಿದಂತೆ ನೆರೆ ರಾಷ್ಟ್ರಗಳೂ ಇದರ ಬೆಳವಣಿಗೆಯನ್ನು ನಿಕಟವಾಗಿ ಗಮನಿಸುತ್ತಿವೆ.
ಏನದು ಧ್ವಜ ವಿವಾದ?
ಈ ಭೇಟಿ ವೇಳೆ ದಕ್ಷಿಣ ಬ್ಲಾಕ್ ಅಧಿಕಾರಿಗಳಿಗೆ ಒಂದು ಪ್ರೋಟೋಕಾಲ್ ಸವಾಲು ಎದುರಾಗುತ್ತಿದೆ. ದ್ವಿಪಕ್ಷೀಯ ಸಭೆಗಳಲ್ಲಿ ಸಾಮಾನ್ಯವಾಗಿ ಆತಿಥೇಯ ದೇಶ ಮತ್ತು ಅತಿಥಿ ದೇಶದ ಧ್ವಜಗಳನ್ನು ಒಟ್ಟಿಗೆ ಪ್ರದರ್ಶಿಸುವ ಪದ್ಧತಿ ಇದೆ. ಆದರೆ ಭಾರತ ತಾಲಿಬಾನ್ ಆಡಳಿತವನ್ನು ಅಧಿಕೃತವಾಗಿ ಗುರುತಿಸದಿರುವುದರಿಂದ ತಾಲಿಬಾನ್ ಧ್ವಜವನ್ನು ಪ್ರದರ್ಶಿಸುವ ಪ್ರಶ್ನೆಯು ಮೂಡಿದೆ.
ಈವರೆಗೆ ನವದೆಹಲಿಯಲ್ಲಿರುವ ಆಫ್ಘಾನ್ ರಾಯಭಾರ ಕಚೇರಿಯು ಹಿಂದಿನ ‘ಆಫ್ಘಾನ್ ಇಸ್ಲಾಮಿಕ್ ರಿಪಬ್ಲಿಕ್’ ಧ್ವಜವನ್ನೇ ಹಾರಿಸುತ್ತಿದೆ. ತಾಲಿಬಾನ್ ಆಡಳಿತದ ಶ್ವೇತ ಧ್ವಜಕ್ಕೆ ಭಾರತ ಸರ್ಕಾರ ಅನುಮತಿ ನೀಡಿಲ್ಲ. ಹಿಂದಿನ ಭೇಟಿಗಳಲ್ಲಿ, ಉದಾಹರಣೆಗೆ ದುಬೈಯಲ್ಲಿ ನಡೆದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರ ಸಭೆಯಲ್ಲಿ, ಯಾವುದೇ ಧ್ವಜ ಹಿನ್ನಲೆಯಲ್ಲಿ ಇರಿಸಲಿಲ್ಲ. ಆದರೆ ಈ ಬಾರಿ ಸಭೆ ನವದೆಹಲಿಯಲ್ಲೇ ನಡೆಯುತ್ತಿರುವುದರಿಂದ ಅದು ರಾಜತಾಂತ್ರಿಕ ಸವಾಲಾಗಿ ಪರಿಣಮಿಸಿದೆ.
ಭಾರತ–ಆಫ್ಘಾನ್ ಉತ್ತಮ ಸಂಬಂಧ
ಭಾರತ–ಆಫ್ಘಾನ್ ರಾಷ್ಟ್ರಗಳ ಮಧ್ಯೆ ಹಿಂದಿನಿಂದಲೂ ಸ್ನೇಹ ಸಂಬಂಧವಿದ್ದು, 2021ರಲ್ಲಿ ಅಮೆರಿಕಾ ಸೇನೆಯ ಹಿಂಪಡೆಯ ನಂತರ ತಾಲಿಬಾನ್ ಅಧಿಕಾರಕ್ಕೆ ಬಂದಾಗ ಭಾರತ ತನ್ನ ಕಾಬುಲ್ ರಾಯಭಾರ ಕಚೇರಿಯನ್ನು ಮುಚ್ಚಿತ್ತು. ಬಳಿಕ 2022ರಲ್ಲಿ ವ್ಯಾಪಾರ, ವೈದ್ಯಕೀಯ ಸಹಾಯ ಹಾಗೂ ಮಾನವೀಯ ಸಹಾಯಕ್ಕಾಗಿ ಸಣ್ಣ ಮಿಷನ್ ಮರುಪ್ರಾರಂಭಿಸಲಾಯಿತು.
ಭಾರತ ತಾಲಿಬಾನ್ ಸರ್ಕಾರವನ್ನು ಅಧಿಕೃತವಾಗಿ ಗುರುತಿಸದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ಉನ್ನತ ಅಧಿಕಾರಿಗಳ ನಡುವೆ ಮಾತುಕತೆಗಳು ಆರಂಭವಾಗಿವೆ.
ಮುತ್ತಾಕಿಯವರ ಭೇಟಿ ಭಾರತದ–ತಾಲಿಬಾನ್ ಸಂಬಂಧಗಳಿಗೆ ಹೊಸ ಆಯಾಮ ನೀಡಲಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಭಾರತ, ರಷ್ಯಾ, ಚೀನಾ ಮತ್ತು ಇತರ ರಾಷ್ಟ್ರಗಳು ಅಫ್ಘಾನಿಸ್ತಾನದಲ್ಲಿ ವಿದೇಶಿ ಸೈನಿಕ ನೆಲೆಗಳ ವಿರುದ್ಧ ಹೇಳಿಕೆ ನೀಡಿದ್ದವು. ಭಾರತ ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿಯ ಉಗ್ರ ಚಟುವಟಿಕೆಗಳಿಗೆ ಬಳಸಬಾರದು ಎಂಬ ತನ್ನ ನಿಲುವನ್ನು ಪುನಃ ದೃಢಪಡಿಸಿದೆ.