ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಹೆಣ್ಮಕ್ಕಳ ಮನ ಗೆದ್ದಿದ್ದ ಕಾಂಗ್ರೆಸ್ ಸರ್ಕಾರ, ಈಗ ಮತ್ತೊಂದು ಪ್ರಗತಿಪರ ಹೆಜ್ಜೆ ಇಟ್ಟಿದೆ. ಋತುಚಕ್ರದ ಸಮಯದಲ್ಲಿ (Menstrual Leave) ಮಹಿಳೆಯರಿಗೆ ಒಂದು ದಿನ ರಜೆ ನೀಡುವ ನೀತಿಗೆ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರೆತಿದೆ.
:max_bytes(150000):strip_icc():format(webp)/GettyImages-503117005-579a41623df78c32762d03a1.jpg)
ಕಾರ್ಮಿಕ ಇಲಾಖೆ ಮಂಡಿಸಿದ್ದ “ಋತುಚಕ್ರ ರಜೆ ನೀತಿ 2025 (Menstrual Leave Policy, 2025)” ಪ್ರಸ್ತಾವನೆಗೆ ಕ್ಯಾಬಿನೆಟ್ ಒಪ್ಪಿದೆ. ಇದರಂತೆ ರಾಜ್ಯ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ ಫ್ಯಾಕ್ಟರಿಗಳು, ಐಟಿ ಸಂಸ್ಥೆಗಳು, ಎಂಎನ್‌ಸಿಗಳು ಮತ್ತು ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರು ಸಂಬಳ ಸಹಿತ ರಜೆಗೆ ಅರ್ಹರಾಗುತ್ತಾರೆ.
ಪ್ರತಿ ವರ್ಷ 12 ದಿನ ರಜೆ
ಪ್ರತಿ ಮಹಿಳಾ ಉದ್ಯೋಗಿಗೆ ವರ್ಷಕ್ಕೆ 12 ದಿನಗಳ ಋತುಚಕ್ರ ರಜೆ ನೀಡಲಾಗುತ್ತದೆ. ತಿಂಗಳಲ್ಲಿ ಯಾವ ದಿನ ರಜೆ ಪಡೆಯಬೇಕೆಂಬುದನ್ನು ಸ್ವತಃ ಮಹಿಳೆಯೇ ನಿರ್ಧರಿಸಬಹುದು ಎಂದು ಸರ್ಕಾರ ತಿಳಿಸಿದೆ.
ಲಾಡ್ ಹೇಳೀದ್ದೇನು?
ಕ್ಯಾಬಿನೆಟ್ ಸಭೆಯ ಬಳಿಕ ಕಾರ್ಮಿಕ ಸಚಿವ ಸಂತೋಷ ಲಾಡ್, “ಹೆಣ್ಣುಮಕ್ಕಳ ಆರೋಗ್ಯ ಮತ್ತು ಗೌರವವನ್ನು ಕಾಪಾಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ವರ್ಷಕ್ಕೆ 12 ದಿನಗಳ ರಜೆ ಸಂಬಳ ಸಹಿತ ನೀಡಲಾಗುತ್ತದೆ. ಕಾನೂನು ಇಲಾಖೆ ಜೊತೆಗೆ ಚರ್ಚಿಸಿ ಎಲ್ಲಾ ಅಂಶಗಳನ್ನೂ ಪರಿಶೀಲಿಸಲಾಗಿದೆ. ಬೇಗನೆ ಬಿಲ್ ತರಲಾಗುತ್ತದೆ ಮತ್ತು ಭವ್ಯ ಕಾರ್ಯಕ್ರಮದ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ,” ಎಂದು ಹೇಳಿದರು.
ಇತರೆ ರಾಜ್ಯಗಳಲ್ಲಿ ಈಗಾಗಲೇ ಅನುಷ್ಠಾನ
ಬಿಹಾರ ಮತ್ತು ಕೇರಳ ರಾಜ್ಯಗಳಲ್ಲಿ ಈಗಾಗಲೇ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರ ರಜೆ ನೀಡಲಾಗುತ್ತಿದೆ. ಕರ್ನಾಟಕ ಸರ್ಕಾರದ ಈ ಕ್ರಮವು ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗುವ ಸಾಧ್ಯತೆ ಇದೆ ಎಂದು ಸರ್ಕಾರಿ ವಲಯಗಳು ಹೇಳಿವೆ.