ಬೆಂಗಳೂರು: ಕಿಚ್ಚ ಸುದೀಪ್ ಅಖಾಡಕ್ಕೆ ಇಳಿಯುತ್ತಿದ್ದಂತೆ ಬಂದ್ ಆಗಿದ್ದ ಬಿಗ್ ಬಾಸ್ ಅರಮನೆ ಇಂದು ಮುಂಜಾನೆ ಮತ್ತೆ ರೀ ಓಪನ್ ಆಗಿದ್ದು ಒಂದು ದೊಡ್ಡ ಹೈಡ್ರಾಮಾಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಇದರ ಬೆನ್ನಲ್ಲೇ ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ‘ಬಿಗ್ ಬಾಸ್’ ಶೋ ಪುನರಾರಂಭಗೊಂಡಿದೆ.
‘ಬಿಗ್ ಬಾಸ್’ ಮನೆ ಬಂದ್ ಆಗುತ್ತಿದ್ದಂತೆ ಸ್ಪರ್ಧಿಗಳನ್ನ ಹತ್ತಿರದ ಖಾಸಗಿ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿತ್ತು. 24 ಗಂಟೆಗಳ ಕಾಲ ರೆಸಾರ್ಟ್‌ನಲ್ಲಿಯೇ ಸ್ಪರ್ಧಿಗಳು ವಾಸ್ತವ್ಯ ಹೂಡಿದ್ದರು. ರೆಸಾರ್ಟ್‌ನಲ್ಲೂ ‘ಬಿಗ್ ಬಾಸ್’ ಪ್ರೋಟೋಕಾಲ್ ಅನ್ನು ಸ್ಪರ್ಧಿಗಳು ಕಟ್ಟುನಿಟ್ಟಾಗಿ ಫಾಲೋ ಮಾಡುವಂತೆ ಸೂಚಿಸಲಾಗಿತ್ತು. 24 ಗಂಟೆ ಬಳಿಕ ರೆಸಾರ್ಟ್‌ನಿಂದ ಹೊರಬಂದ ಸ್ಪರ್ಧಿಗಳು ಗುರುವಾರ ಮಧ್ಯರಾತ್ರಿ ನೇರವಾಗಿ ‘ಬಿಗ್ ಬಾಸ್’ ಮನೆಗೆ ನುಗ್ಗಿದ್ದು, ಆಟ ಶುರುಮಾಡಿದ್ದಾರೆ.
‘ಸಕಾಲದಲ್ಲಿ ಬೆಂಬಲ ನೀಡಿದ ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದಗಳನ್ನ ತಿಳಿಸುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ‘ಬಿಗ್ ಬಾಸ್ ಕನ್ನಡ’ ಭಾಗಿಯಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಡಿಸಿಎಂ ಅವರಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ನಲಪಾಡ್ ಅವರ ಪ್ರಾಮಾಣಿಕ ಪ್ರಯತ್ನಗಳಿಗೆ ನನ್ನ ಧನ್ಯವಾದ. ‘ಬಿಗ್ ಬಾಸ್ ಕನ್ನಡ 12’ ಇಲ್ಲಿಯೇ ಇರುತ್ತದೆ’’ ಎಂದು ಕಿಚ್ಚ ಸುದೀಪ್ ಎಕ್ಸ್ ಮಾಡಿ ಬಿಗ್‌ಬಾಸ್ ಶುರುವಾಗಿರುವುದನ್ನು ಖಚಿತಪಡಿಸಿದ್ದಾರೆ.
ʻಬಿಗ್ ಬಾಸ್‌ಗೆ ಬೆಂಬಲವಾಗಿ, ನಮ್ಮೆಲ್ಲರಿಗೂ ಬೆನ್ನುಲುಬಾಗಿ, ಸದಾ ಜೊತೆಗಿರುವ ನಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪರಿಗೆ ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್ ತಂಡದ ವತಿಯಿಂದ ತುಂಬು ಹೃದಯದಿಂದ ಧನ್ಯವಾದಗಳು” ಎಂದು ಕಲರ್ಸ್ ಕನ್ನಡ ವಾಹಿನಿಯೂ ಸಹ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಡಿಸಿಎಂ ಡಿಕೆ ಶಿವಕುಮಾರ್ ಆದೇಶ
‘’ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಗೆ ಬಿಡದಿಯಲ್ಲಿರುವ ‘ಬಿಗ್ ಬಾಸ್ ಕನ್ನಡ’ ಚಿತ್ರೀಕರಣ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌ನ ಬೀಗ ತೆರವುಗೊಳಿಸುವಂತೆ ಸೂಚಿಸಿದ್ದೇನೆ. ಪರಿಸರ ನಿಯಮ ಪಾಲನೆ ಆದ್ಯತಾ ವಿಷಯವಾಗಿದ್ದರೂ, ಮಾಲಿನ್ಯ ನಿಯಂತ್ರಣ ಮಂಡಳಿಯ ಮಾನದಂಡಗಳಿಗೆ ಅನುಗುಣವಾಗಿ ತನ್ನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ವಿಇಎಲ್‌ಎಸ್ ಸ್ಟುಡಿಯೋಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ಗೆ ಸಮಯಾವಕಾಶ ನೀಡಲಾಗುವುದು. ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ಎತ್ತಿಹಿಡಿಯವುದರ ಜತೆಗೆ, ಕನ್ನಡ ಮನರಂಜನಾ ಉದ್ಯಮಕ್ಕೆ ನನ್ನ ಬೆಂಬಲ ಸದಾ ಇರುತ್ತದೆ’’ ಎಂದು ಎಕ್ಸ್‌ನಲ್ಲಿ ಡಿಕೆ ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ನಿರ್ದೇಶನದ ಮೇರೆಗೆ ಜಾಲಿವುಡ್ ಸ್ಟುಡಿಯೋಗೆ ಹಾಕಲಾಗಿದ್ದ ಬೀಗವನ್ನ ತೆರವು ಮಾಡಲಾಗಿದ್ದು, ‘ಬಿಗ್ ಬಾಸ್’ ಮನೆಯನ್ನೂ ಓಪನ್ ಮಾಡಲಾಗಿದೆ.
ಅಷ್ಟಕ್ಕೂ ಬಂದ್ ಆಗಿದ್ಯಾಕೆ?
ಜಾಲಿವುಡ್ ಸ್ಟುಡಿಯೋ ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಡುತ್ತಿತ್ತು. ಇದು ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆ 1974ರ ನೇರ ಉಲ್ಲಂಘನೆ. ಪರಿಣಾಮ, ಜಾಲಿವುಡ್ ಸ್ಟುಡಿಯೋವನ್ನು ಮುಚ್ಚಬೇಕು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ನೋಟೀಸ್ ಜಾರಿ ಮಾಡಿತ್ತು. ನೋಟೀಸ್ ಅನ್ವಯ, ರಾಮನಗರ ಜಿಲ್ಲಾಡಳಿತ ಜಾಲಿವುಡ್ ಸ್ಟುಡಿಯೋಸ್ ಅಂಗಳದಲ್ಲೇ ಇರುವ ‘ಬಿಗ್ ಬಾಸ್’ ಮನೆಗೆ ಬೀಗ ಹಾಕಿತ್ತು. ಇದೀಗ ಕಿಚ್ಚ ಸುದೀಪ್ ಹಾಗೂ ಡಿಕೆ ಶಿವಕುಮಾರ್ ಮಧ್ಯಪ್ರವೇಶದಿಂದ ಈ ಪ್ರಕರಣ ಸುಖಾಂತ್ಯ ಕಂಡಿದೆ.