ಅಂತರ್ ರಾಜ್ಯ ವಾಹನ ಕಳ್ಳ ಸೆರೆ !

ಮಂಗಳೂರು: ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪಿಕಪ್‌ ವಾಹನ ಹಾಗೂ ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೈಕ್‌ ಕಳ್ಳತನ ಮಾಡಿದ ಕೇರಳ ರಾಜ್ಯದ ಅಂತರ್ ರಾಜ್ಯ ವಾಹನ ಖದೀಮನ್ನು ದಸ್ತಗಿರಿ ಮಾಡಿ ಪಿಕಪ್‌ ಹಾಗೂ ಬೈಕ್‌ನ್ನು ವಶಪಡಿಸಿಕೊಳ್ಳುವಲ್ಲಿ ಸುರತ್ಕಲ್‌ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇರಳದ ತಿರುವನಂತಪುರದ ವರ್ಕಳಾ ಗ್ರಾಮ ರಾತಿಕ್ಕಲ್ ನಿವಾಸಿ ಹಂಝ ಕುಪ್ಪಿಕಂಡ ಯಾನೆ ಹಂಸ ಯಾನೆ ಹಂಝ ಪೊನ್ನನ್ ಪ್ರಾಯ(29) ಬಂಧಿತ ಆರೋಪಿ.

ಕುಳಾಯಿಯ ಸುಕುಮಾರ್‌ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನ ಸೆ.30ರಂದು ರಾತ್ರಿ ಕಳವಾಗಿದ್ದು, ಈ ಬಗ್ಗೆ ಅ.3ರಂದು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪತ್ತೆ ಕಾರ್ಯವನ್ನು ನಡೆಸುತ್ತಿದ್ದ ಪೊಲೀಸರಿಗೆ ಮಂಗಳವಾರ ಯುವಕನೋರ್ವ ಬೈಕ್‌ನಲ್ಲಿ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದು ಆತನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನಲ್ಲಿ ಬೈಕ್ ಗೆ ಸಬಂಧಿಸಿದಂತೆ ಯಾವುದೇ ದಾಖಲೆ ಇರಲಿಲ್ಲ. ಪರಿಶೀಲನೆ ನಡೆಸಿದಾಗ ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯ ಫಾರಂ ಮಾಲ್‌ ಬಳಿಯಿಂದ ಕಳ್ಳತನ ಮಾಡಿರುವ ಬೈಕ್ ಎಂದು ತಿಳಿದು ಬಂದಿದೆ. ಇನ್ನಷ್ಟು ವಿಚಾರಣೆಗೆ ಒಳ ಪಡಿಸಿದಾಗ ಆತ ಕುಳಾಯಿಂದ ಪಿಕಪ್ ಕಳ್ಳ ತನ ಮಾಡಿರುವ ಬಗ್ಗೆಯೂ ಬಾಯಿ ಬಿಟ್ಟಿದ್ದಾನೆ. ಆತನಿಂದ ಸ್ವಾಧೀನಪಡಿಸಿಕೊಂಡ ವಾಹನಗಳ ಒಟ್ಟು ಮೊತ್ತ 3.10 ಲ.ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

ಆರೋಪಿ ಹಂಝ ಕುಪ್ಪಿಕಂಡ ಕಳ್ಳತನ ಆರೋಪಿಯಾಗಿದ್ದು, ಈತನ ವಿರುದ್ದ ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊಬೈಲ್‌ ಕಳ್ಳತನ, ವಾಹನ ಕಳ್ಳತನ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಸುರತ್ಕಲ್‌ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕ ಪ್ರಮೋದ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಶಿಧರ ಶೆಟ್ಟಿ, ಎಎಸ್‌ಐ ರಾಜೇಶ್‌ ಆಳ್ವ,ಸಿಬಂದಿಯವರಾದ ಉಮೇಶ್‌,ವಿನೋದ್‌ ಕುಮಾರ್‌,ನಾಗರಾಜ್‌, ಸುನೀಲ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

error: Content is protected !!