ಮಂಗಳೂರು: ಬರ್ಕೆ ಪೊಲೀಸರು ಲಾಲ್ ಬಾಗ್ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ ₹9,72,745 ಮೌಲ್ಯದ ನಿಷೇಧಿತ ಇ-ಸಿಗರೇಟುಗಳು, ಸಿಗರೇಟುಗಳು ಮತ್ತು ಹುಕ್ಕಾ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಕುರಿತಾಗಿ ಅಂಗಡಿಯ ಮಾಲಕರು ಸೇರಿ ಮೂರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ಬಂಟ್ವಾಳ ಗಣೇಶ್ ಕೋಡಿ ಹೌಸ್ ನಿವಾಸಿ ಸಂತೋಷ್(32), ಕುದ್ರೋಳಿ ಜಾಮಿಯಾ ಮಸೀದಿ ಬಳಿಯ ನಿವಾಸಿ ಇಬ್ರಾಹಿಂ ಇರ್ಷಾದ್ (33) ಹಾಗೂ ಅಂಗಡಿ ಮಾಲಕ ಶಿವು ದೇಶಕೋಡಿ ಪ್ರಕರಣದ ಆರೋಪಿಗಳು.
ಬರ್ಕೆ ಪೊಲೀಸ್ ಠಾಣಾ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಅ.6ರ ಶನಿವಾರ ಸಂಜೆ, ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ನೇತೃತ್ವದಲ್ಲಿ ಪೊಲೀಸರು ಲಾಲ್ ಬಾಗ್‌ನ “ಆಮಂತ್ರಣ” ಅಂಗಡಿಯಲ್ಲಿ ದಾಳಿ ನಡೆಸಿದಾಗ ಇ ಸಿಗರೇಟ್ ಸಹಿತ ಹಲವು ಸೊತ್ತುಗಳು ಪತ್ತೆಯಾಗಿದೆ.
ಅಂದಾಜು ₹4,43,125 847 ಇ-ಸಿಗರೇಟು ಪ್ಯಾಕ್‌ಗಳು , ಅಂದಾಜು ₹5,09,120 ಮೌಲ್ಯದ 96 ಪ್ಯಾಕ್ ಸಿಗರೇಟುಗಳು (ಸ್ವದೇಶಿ ಹಾಗೂ ವಿದೇಶಿ, 412 ಬಾಕ್ಸ್), ಅಂದಾಜು ₹20,500 ಮೌಲ್ಯದ 25 ಹುಕ್ಕಾ ಉಪಕರಣಗಳು ಸೇರಿ ಒಟ್ಟು ₹9,72,745 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಲಾಗಿದೆ.
ಆರೋಪಿಗಳ ವಿರುದ್ಧ ಭಾರತದಲ್ಲಿ ಇ-ಸಿಗರೇಟು ಮತ್ತು ಧೂಮಪಾನ ಉತ್ಪನ್ನಗಳ ಅಕ್ರಮ ಮಾರಾಟ ಮತ್ತು ಬಳಕೆಯನ್ನು ತಡೆಯಲು ಕೈಗೊಳ್ಳುವ ಕಾನೂನು ಕ್ರಮಕ್ಕೆ ಅನುಗುಣವಾಗಿ 2019 (ಕಲಂ 7 & 8) ಮತ್ತು ಕೋಪ್ಟಾ ಕಲಂ 20(2)) ಅನ್ವಯ ಪ್ರಕರಣಗಳು ದಾಖಲಾಗಿದೆ.