ಬೆಂಗಳೂರು: ‘ಕಾಂತಾರ ಚಾಪ್ಟರ್ 1’ ಸಿನಿಮಾ ಪ್ರೇಕ್ಷಕರಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಆದರೆ ಚಿತ್ರಮಂದಿರಗಳಲ್ಲಿ ಕೆಲ ಅಭಿಮಾನಿಗಳ ಅತಿರೇಕದ ವರ್ತನೆ ಈಗ ತುಳುಕೂಟದ ಕೆಂಗಣ್ಣಿಗೆ ಕಾರಣವಾಗಿದೆ.
ಚಿತ್ರದಲ್ಲಿ ಕಾಣಿಸುವ ದೈವರಾಧನೆಯ ದೃಶ್ಯಗಳಿಂದ ಪ್ರೇರಿತರಾದ ಕೆಲವರು ಥಿಯೇಟರ್‌ಗಳಲ್ಲೇ ದೈವದ ವೇಷ ಧರಿಸಿ ಓಡಾಡುತ್ತಿರುವುದು, ಕಿರುಚಾಡುತ್ತಿರುವುದು ತುಳುವರನ್ನು ಕೋಪಕ್ಕೆ ನೂಕಿದೆ. ಈ ವರ್ತನೆ ದೈವದ ನಂಬಿಕೆಯನ್ನೇ ಅವಮಾನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ತುಳುಕೂಟ ನಿರ್ದೇಶಕ-ನಟ ರಿಷಬ್ ಶೆಟ್ಟಿಗೆ ಪತ್ರ ಬರೆದು, ಈ ರೀತಿಯ ವರ್ತನೆ ತಕ್ಷಣ ನಿಲ್ಲಿಸಲು ಮನವಿ ಮಾಡಿದೆ. “ದೈವದ ಗೌರವ ಕಾಪಾಡಿ. ಇಂತಹ ಹುಚ್ಚಾಟವನ್ನು ತಡೆಗಟ್ಟುವಂತೆ ಅಭಿಮಾನಿಗಳಿಗೆ ತಿಳಿಸಿ,” ಎಂದು ತುಳುಕೂಟ ತನ್ನ ಪತ್ರದಲ್ಲಿ ಹೇಳಿದೆ.
ಇದಕ್ಕೂ ಮೊದಲು ‘ಕಾಂತಾರ’ ಮೊದಲ ಭಾಗ ಬಿಡುಗಡೆಯಾದಾಗಲೂ ಇದೇ ರೀತಿಯ ಘಟನೆಗಳು ನಡೆದಿದ್ದವು. ಆಗ ತುಳುಕೂಟ ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಮನವಿ ಮಾಡಿತ್ತು. ನಂತರ ಪರಿಸ್ಥಿತಿ ಸುಧಾರಿಸಿತ್ತು.
ಆದರೆ ಈಗ ‘ಚಾಪ್ಟರ್ 1’ ಬಿಡುಗಡೆಯಾದ ಬಳಿಕ ಮತ್ತೆ ಅತಿರೇಕದ ವರ್ತನೆಗಳು ಪುನರಾವರ್ತನೆಯಾಗಿವೆ. ತುಳುಕೂಟ ಈಗ ಕಾನೂನು ಕ್ರಮ ಕೈಗೊಳ್ಳಲು ಸಿದ್ದತೆ ನಡೆಸಿದೆ.
“ದೈವದ ವೇಷ ಧರಿಸಿ ಎಲ್ಲೆಂದರಲ್ಲಿ ನಾಟಕ ಮಾಡುವುದು ನಂಬಿಕೆಯ ಅವಮಾನ,” ಎಂದು ತುಳುಕೂಟ ಎಚ್ಚರಿಸಿದೆ. “ಇದನ್ನು ಮುಂದುವರೆಸಿದರೆ ಕಾನೂನು ಕ್ರಮ ತಪ್ಪದು.”