ಉಡುಪಿ: ಆಕಾಶಪ್ರಿಯರಿಗಾಗಿ ಖಗೋಳ ಲೋಕ ಮತ್ತೊಮ್ಮೆ ರಸದೌತಣಕ್ಕೆ ಸಜ್ಜಾಗಿದೆ. ಈ ವರ್ಷದ ಮೊದಲ ಸೂಪರ್‌ಮೂನ್ ಆಗಿರುವ ‘ಹಾರ್ವೆಸ್ಟ್ ಮೂನ್’ ಅಕ್ಟೋಬರ್ 6 ಮತ್ತು 7ರ ರಾತ್ರಿ ಆಕಾಶದಲ್ಲಿ ದೇದೀಪ್ಯಮಾನವಾಗಿ ಹೊಳೆಯಲಿದ್ದು, ಅದ್ಭುತ ದೃಶ್ಯಾವಳಿಯನ್ನು ಕಣ್ತುಂಬಿಕೊಳ್ಳಬಹುದು.
ಇತರ ಸೂಪರ್‌ಮೂನ್‌ಗಳಿಗಿಂತ ವಿಭಿನ್ನವಾದ ಹಾರ್ವೆಸ್ಟ್ ಮೂನ್ ವೇಳೆ ಚಂದ್ರನ ಬೆಳಕು ಹೆಚ್ಚು ಪ್ರಕಾಶಮಾನವಾಗಿ, ಗಾತ್ರದಲ್ಲೂ 18 ಅಂಶ ದೊಡ್ಡದಾಗಿ ಕಾಣಿಸಲಿದ್ದು, ರಾತ್ರಿಯ ಆಕಾಶವು ಬೆಳ್ಳಿ ಎಳೆಯ ಮಂಜು ಬಣ್ಣದಿಂದ ಕಂಗೊಳಿಸಲಿದೆ.
ಖಗೋಳಶಾಸ್ತ್ರಜ್ಞ ಡಾ. ಎ.ಪಿ. ಭಟ್ (ಉಡುಪಿ)ಹೇಳಿದಿಷ್ಟು:
“ಈ ವರ್ಷದ ಸೂಪರ್‌ಮೂನ್ ಸರಣಿ ಇದೀಗ ಪ್ರಾರಂಭವಾಗುತ್ತಿದ್ದು, ಅಕ್ಟೋಬರ್ 7, ನವೆಂಬರ್ 5 ಮತ್ತು ಡಿಸೆಂಬರ್ 4ರ ಹುಣ್ಣಿಮೆಗಳೆಲ್ಲವೂ ಸೂಪರ್‌ಮೂನ್‌ಗಳಾಗಿವೆ. ಇಂದು ಚಂದ್ರ ಭೂಮಿಗೆ ಸುಮಾರು 23,000 ಕಿ.ಮೀ. ಸಮೀಪ ಬರುವುದರಿಂದ ಅದು ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಮತ್ತು ಹೊಳೆಯುವಂತೆ ಕಾಣಿಸಲಿದೆ. “ಹಾರ್ವೆಸ್ಟ್ ಮೂನ್ ಎಂಬ ಹೆಸರು ಯುರೋಪಿನ ದೇಶಗಳಲ್ಲಿ (ಜರ್ಮನಿ, ಫ್ರಾನ್ಸ್ ಮುಂತಾದವುಗಳಲ್ಲಿ) ಬಳಸಲಾಗುತ್ತದೆ.
ನಮ್ಮ ಭಾರತದಲ್ಲಿ ಇದನ್ನು ಶರತ್ಕಾಲದ ಹುಣ್ಣಿಮೆ ಎಂದು ಕರೆಯುತ್ತೇವೆ. ಈ ಸಮಯದಲ್ಲಿ ಚಂದ್ರ ಅತ್ಯಂತ ಸುಂದರವಾಗಿ ಗೋಚರಿಸುವುದರ ಜೊತೆಗೆ, ಮೋಡಗಳ ಮಧ್ಯೆ ಬೆಳಕಿನ ಹ್ಯಾಲೋ ಸಹ ಕಾಣಬಹುದು. ಪ್ರಕೃತಿಯ ಈ ವೈಭವವನ್ನು ಎಲ್ಲರೂ ಸವಿಯಬೇಕು.” ಎಂದಿದ್ದಾರೆ.
ಹಿಂದಿನ ಬಾರಿ ಇದೇ ರೀತಿಯ ಹಾರ್ವೆಸ್ಟ್ ಮೂನ್ 2020ರಲ್ಲಿ ಕಣ್ತುಂಬಿಕೊಳ್ಳಲಾಗಿತ್ತು. ಈ ಬಾರಿ ಅದು ಎರಡು ರಾತ್ರಿ ಕಾಣಿಸಿಕೊಳ್ಳುವ ಕಾರಣದಿಂದ, ಭಾರತ, ಅಮೆರಿಕ, ಬ್ರಿಟನ್ ಸೇರಿದಂತೆ ಅನೇಕ ದೇಶಗಳ ಖಗೋಳಪ್ರಿಯರು ಇದನ್ನು ವೀಕ್ಷಿಸಲು ಸಜ್ಜಾಗಿದ್ದಾರೆ. ಗತ ತಿಂಗಳ ಸೆಪ್ಟೆಂಬರ್ 7–8ರ ಭಾದ್ರಪದ ಪೂರ್ಣಿಮೆಯಂದು ಸಂಭವಿಸಿದ ಸಂಪೂರ್ಣ ಚಂದ್ರಗ್ರಹಣದ ನಂತರ, ಈ ಸೂಪರ್‌ಮೂನ್ ಆಕಾಶದ ಮತ್ತೊಂದು ಅಪರೂಪದ ಕಣ್ತುಂಬಿಕೊಳ್ಳುವ ಕ್ಷಣ.
🔭 ಆಕಾಶವನ್ನೇ ನೋಡಿ…!
-ಅಕ್ಟೋಬರ್ 6 ಮತ್ತು 7ರ ರಾತ್ರಿ 7.30ರಿಂದ 10.30ರವರೆಗೆ ಪೂರ್ವ ದಿಕ್ಕಿನಲ್ಲಿ ಚಂದ್ರನನ್ನು ವೀಕ್ಷಿಸಬಹುದು.
– ತೆರೆದ ಆಕಾಶದ ಪ್ರದೇಶಗಳಲ್ಲಿ ಕ್ಯಾಮೆರಾ ಅಥವಾ ದೂರದರ್ಶಕದ ನೆರವಿನಿಂದ ನೋಡುವಂತಾದರೆ ಈ ಅಪೂರ್ವ ಸೌಂದರ್ಯವನ್ನು ಸಂಪೂರ್ಣವಾಗಿ ಅನುಭವಿಸಬಹುದು.