ಬೆಂಗಳೂರು: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ‘ಕೋಲ್ಡ್ರಿಫ್’ ಮತ್ತು ‘ನೆಕ್ಸ್ಟ್ರೋ-ಡಿಎಸ್’ ಎಂಬ ಕೆಮ್ಮಿನ ಸಿರಪ್ ಸೇವಿಸಿದ 11 ಕಂದಮ್ಮಗಳು ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಘಟನೆಯ ನಂತರ ರಾಜಸ್ಥಾನ ಸರ್ಕಾರವು ಕೇಸನ್ಸ್ ಫಾರ್ಮಾ ಕಂಪನಿಯ 19 ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿದೆ.
ಈ ಸಿರಪ್‌ಗಳನ್ನು ಸೇವಿಸಿದ ಮಕ್ಕಳಿಗೆ ಮೂತ್ರ ವಿಸರ್ಜನೆ ನಿಂತು, ದೇಹದಲ್ಲಿ ಊತ ಕಾಣಿಸಿಕೊಂಡು, ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಾಮಾನ್ಯವಾಗಿ ಕೆಮ್ಮು, ಶೀತ ಇದ್ದರೆ ಪೋಷಕರು ವೈದ್ಯರ ಸಲಹೆಯಂತೆ ಸಿರಪ್‌ಗಳನ್ನು ನೀಡುವುದು ರೂಢಿ, ಆದರೆ, ಈ ಘಟನೆ ಪೋಷಕರಲ್ಲಿ ಭಯ ಹುಟ್ಟಿಸಿದೆ.
ಈ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ತೀವ್ರ ಎಚ್ಚರಿಕೆ ವಹಿಸಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಸಿರಪ್ ನೀಡದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಾಮಾನ್ಯವಾಗಿ ಸಿರಪ್‌ಗಳ ಅಗತ್ಯ ಇರುವುದಿಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆಯಂತೆ ಸೂಕ್ತ ಪ್ರಮಾಣದಲ್ಲಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.