ಕಾರ್ಕಳ: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ನಡೆದಿದ್ದ ಹದಿಹರೆಯದ ಯುವತಿ ಸಾವು ಪ್ರಕರಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪ್ರೀತಿಸಿದ ಯುವಕನ ಜೊತೆ ಹೋಗುತ್ತೇನೆ ಎಂದ ಕಾರಣಕ್ಕೆ ತಾಯಿಯೇ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎನ್ನುವುದು ಬಯಲಾಗಿದೆ.
ಕಾರ್ಕಳದ ಹಿರ್ಗಾನ ಗ್ರಾಮದ ನಿವಾಸಿಗಳಾದ ಶೇಖ್ ಮುಸ್ತಫಾ ಮತ್ತು ಗುಲ್ಜಾರ್ ಬಾನು ಅವರ ಪುತ್ರಿ ಶಿಫನಾಜ್(17) ಮೃತ ಯುವತಿ. ಈಕೆಯನ್ನು ಕೊಲೆ ಮಾಡಿದ ತಾಯಿ ಗುಲ್ಜಾರ್ ಬಾನುಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಮಾಹಿತಿ ಪ್ರಕಾರ ಶಿಫನಾಜ್ ತಾನು ಪ್ರೀತಿಸಿದ ಯುವಕನೊಂದಿಗೆ ಹೋಗುವುದಾಗಿ ತಿಳಿಸಿದ್ದಳು. ಇದರಿಂದ ಕೆರಳಿದ ಗುಲ್ಜಾರ್ ಬಾನು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಗಲಾಟೆ ಜೋರಾಗಿ ಮಗಳ ಬಾಯಿಗೆ ಬಟ್ಟೆ ತುರುಕಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂಬ ಆಘಾತಕಾರಿ ಮಾಹಿತಿ ಲಭಿಸಿದೆ.
ಶಿಫನಾಜ್ ಸಾವನ್ನು ಈ ಮೊದಲು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ ಪೊಲೀಸರಿಗೆ ಅನುಮಾನ ವ್ಯಕ್ತವಾದ ಕಾರಣ ಕಾರ್ಕಳ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿರುವುದರಿಂದ ಸಾವು ಸಂಭವಿಸಿರುವುದು ಪತ್ತೆಯಾಗಿದೆ.
ವರದಿಯ ಆಧಾರದ ಮೇಲೆ ಪೊಲೀಸರು ಗುಲ್ಜಾರ್ ಬಾನು ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ.