ಮಂಗಳೂರು: ಕೆಂಪುಕಲ್ಲು ತೆಗೆಯುವ ರಾಯಧನ(ರಾಯಲ್ಟಿ) ದರವನ್ನು ಸರಕಾರ ಕಡಿಮೆ ಮಾಡಿದರೂ ಮಾರುಕಟ್ಟೆಯಲ್ಲಿ ಮಾತ್ರ ಒಂದು ಕಲ್ಲಿನ ದರ ₹50–₹55 ವರೆಗೆ ಇದೆ. ಹಾಗಾದರೆ ಮೂರ್ನಾಲ್ಕು ತಿಂಗಳ ಕಾಲ ಕೆಂಪುಕಲ್ಲು ಗಣಿಗಾರಿಕೆಗೆ ನಿಷೇಧ ಹೇರಿ ಜನರನ್ನು ದೂಡುವ ದರ್ದು ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸಲಾರಂಭಿಸಿದ್ದಾರೆ.
ನಿಯಮಗಳನ್ನು ಸರಳಗೊಳಿಸುವ ಆದೇಶ ಹೊರಡಿಸಿದರೂ ಗಣಿ ಇಲಾಖೆಯ ಮಾರ್ಗಸೂಚಿ ಇನ್ನೂ ಬಾರದ ಕಾರಣ ಹೊಸ ದರ ಸೂಚಿ ಬರಬೇಕು ಎಂದು ಇಲಾಖೆ ಹೇಳುತ್ತಿದೆ. ಸಮಸ್ಯೆ ಬಗೆಹರಿಯಲು ಇನ್ನೆಷ್ಟು ದಿನ ಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೆ ಟನ್‌ಗೆ ₹97ಕ್ಕೆ ಸಿಗುತ್ತಿದ್ದ ಪರ್ಮಿಟ್ ದರ, “2ಡಿ” ರಾಯಧನ ಸೇರಿ ಟನ್‌ಗೆ ₹256 ಆಗಿತ್ತು. 400 ಕಲ್ಲು ಸಾಗಣೆಗೆ ₹900 ಬದಲಾಗಿ ₹2800 ಪಾವತಿಸಬೇಕಾದ್ದರಿಂದ ಪರ್ಮಿಟ್ ಪಡೆಯುವುದು ನಿಂತಿತ್ತು. ಇದರಿಂದ ಕಟ್ಟಡ ಕಾಮಗಾರಿ ಮತ್ತು ಕಾರ್ಮಿಕ ವರ್ಗಕ್ಕೆ ತೊಂದರೆ ಉಂಟಾಯಿತು. ಸಾರ್ವಜನಿಕರ ಒತ್ತಾಯದ ಬಳಿಕ ಸರಕಾರ ದರ ಇಳಿಕೆ ಮತ್ತು ನಿಯಮ ಸರಳಗೊಳಿಸುವ ನಿರ್ಧಾರ ಕೈಗೊಂಡಿದೆ. ಆದರೆ ಆನ್‌ಲೈನ್‌ನಲ್ಲಿ ಇನ್ನೂ ಹಳೆಯ ದರವನ್ನೇ ಪಾವತಿಸಬೇಕಾಗಿದೆ.
ಈ ಹಿಂದೆ ಒಂದು ₹26-₹30ಕ್ಕೆ ಸಿಗುತ್ತಿತ್ತು. ಇದೀಗ ರಾಜಧನ ಇಳಿಸಿದರೂ ₹50–₹55ರಷ್ಟೇ ಇದೆ. ಹಾಗಾಗಿ ಹೊಸ ನಿಯಮಗಳಿಂದ ಜನರಿಗೆ ಯಾವ ಲಾಭವೂ ಆಗಿಲ್ಲ, ಇದೊಂದು ಗುಡ್ಡ ಅಗೆದು ಇಲಿ ಹಿಡಿದ ಕ್ರಮ ಎಂದು ಜಿಲ್ಲೆಯ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.