ಮಂಗಳೂರು: “ಇವತ್ತು ಲಕ್ಷಾಂತರ ರೂಪಾಯಿ ಸುರಿದರೆ ಮಾತ್ರ ಸಿಗುವ ಹೈಟೆಕ್ ಶಿಕ್ಷಣ, ನಾಳೆ ಒಬ್ಬ ಬಡವನ ಮಗನಿಗೂ ಸಿಗಬೇಕು ಅನ್ನೋದು ನನ್ನ ಹಠ. ಯಾಕಂದ್ರೆ, ಇದೇ ಮಂಗಳೂರಿನ ಮಾರುಕಟ್ಟೆಯಲ್ಲಿ ಚೀಲ ಹೊತ್ತು ನಾನು ಆ ನೋವನ್ನು ಅನುಭವಿಸಿದ್ದೇನೆ” – ಇದು ಯತಿಕಾರ್ಪ್ ಇಂಡಿಯಾ ಸಂಸ್ಥೆಯ ಸಿಇಒ ಯತೀಶ್ ಕೆ.ಎಸ್. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟ ಮಾತುಗಳು.

ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಯತೀಶ್, “2014ರಲ್ಲಿ ತಾಂತ್ರಿಕ ಶಿಕ್ಷಣ ಕಲಿಯಬೇಕು ಅನ್ನೋ ಕನಸ ಹೊತ್ತು ಮಂಗಳೂರಿಗೆ ಬಂದಾಗ ನನ್ನ ಕೈಯಲ್ಲಿ ಕಾಸಿರಲಿಲ್ಲ. ಹಗಲು ಕಾಲೇಜಿಗೆ ಹೋದರೆ, ರಾತ್ರಿ ಸೆಂಟ್ರಲ್ ಮಾರ್ಕೆಟ್‌ನಲ್ಲಿ ತರಕಾರಿ ಚೀಲಗಳನ್ನು ಹೊರುವ ಕೆಲಸ ಮಾಡುತ್ತಿದ್ದೆ. ದಿನಕ್ಕೆ ಕೇವಲ 2-3 ಗಂಟೆ ನಿದ್ರಿಸಿ ಕಲಿತಿದ್ದೇನೆ. ಅಂದು ಹಣದ ಕೊರತೆಯಿಂದ ನಾನು ಅನುಭವಿಸಿದ ಕಷ್ಟ ಯಾವ ವಿದ್ಯಾರ್ಥಿಗೂ ಬರಬಾರದು ಎಂಬ ಸಂಕಲ್ಪವೇ ಇಂದು ಈ ‘AI ಕಾರ್ಡ್’ ಜನನಕ್ಕೆ ಕಾರಣವಾಯಿತು” ಎಂದು ಭಾವುಕರಾಗಿ ನುಡಿದರು.

“ಮಾರುಕಟ್ಟೆಯಲ್ಲಿ 1.5 ಲಕ್ಷಕ್ಕೂ ಅಧಿಕ ವೆಚ್ಚವಿರುವ ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ಅನಾಲಿಟಿಕ್ಸ್ ಕೋರ್ಸ್‌ಗಳನ್ನು ನಾವು ಕೇವಲ 499 ರೂಪಾಯಿಗೆ ನೀಡುತ್ತಿದ್ದೇವೆ. ಯಾವುದೇ ಗುಪ್ತ ಶುಲ್ಕವಿಲ್ಲದೆ, ಒಂದು ಮೊಬೈಲ್ ರೀಚಾರ್ಜ್ ಮಾಡುವಷ್ಟೇ ಬೆಲೆಯಲ್ಲಿ ಬಡ ಮತ್ತು ಗ್ರಾಮೀಣ ಯುವಕರು ಜಾಗತಿಕ ಮಟ್ಟದ ಕೌಶಲಗಳನ್ನು ಕಲಿಯಬಹುದು” ಎಂದು ಅವರು ಮಾಹಿತಿ ನೀಡಿದರು.
ಈಗಾಗಲೇ ಅಮೆರಿಕ, ದುಬೈ ಮತ್ತು ಬ್ರಿಟನ್ ಸೇರಿದಂತೆ ವಿಶ್ವದಾದ್ಯಂತ 75,000ಕ್ಕೂ ಹೆಚ್ಚು ಮಂದಿ ಈ ಕಾರ್ಡ್ ಬಳಸುತ್ತಿದ್ದಾರೆ. ಇಲ್ಲಿ ಕಲಿತ ಎಷ್ಟೋ ವಿದ್ಯಾರ್ಥಿಗಳು ವಾರ್ಷಿಕ 10 ಲಕ್ಷಕ್ಕೂ ಅಧಿಕ ವೇತನದ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಹಲವು ಕಾಲೇಜುಗಳು ಈಗಾಗಲೇ ತಮ್ಮ ಕ್ಯಾಂಪಸ್‌ಗಳಲ್ಲಿ ಈ ಎಐ ಕಾರ್ಡ್ ಅನ್ನು ಕಡ್ಡಾಯಗೊಳಿಸಿವೆ ಎಂದು ಅವರು ವಿವರಿಸಿದರು.

ಕೆಪಿಟಿ ಮಂಗಳೂರಿನ ಪ್ರಾಂಶುಪಾಲರಾದ ಹರೀಶ ಶೆಟ್ಟಿ ಮಾತನಾಡಿ, ಈ ಕ್ರಾಂತಿಕಾರಿ ಯೋಜನೆಗೆ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ (KPT) ಮಂಗಳೂರು ಸಂಸ್ಥೆಯು ಸಾಥ್ ನೀಡಿದ್ದು, ಕೆಪಿಟಿಯೇ ಈ ಕೋರ್ಸ್‌ಗಳಿಗೆ ಪರೀಕ್ಷೆ ನಡೆಸಿ ಸರ್ಕಾರಿ ಮಾನ್ಯತೆಯುಳ್ಳ ಪ್ರಮಾಣಪತ್ರವನ್ನು ನೀಡಲಿದೆ. ಈ ಒಪ್ಪಂದದ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್ ಸಿ.ಪಿ., ನಿರ್ದೇಶಕ ಪ್ರಖ್ಯಾತ್ ಹಾಗೂ ಜನರಲ್ ಮ್ಯಾನೇಜರ್ ಕೃಪಾ ಕೆ. ಉಪಸ್ಥಿತರಿದ್ದರು.