ಅಕ್ರಮ ಗೋಹತ್ಯೆ- 56 ಕೆ.ಜಿ. ಮಾಂಸ ಪತ್ತೆ, ಆರೋಪಿಯ ಮನೆಯ ಆವರಣ ಜಪ್ತಿ

ಬೆಳ್ತಂಗಡಿ: ತಾಲೂಕಿನ ಬಾರ್ಯ ಗ್ರಾಮದ ಹೊಸವಕ್ಲು ಎಂಬಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡುತ್ತಿದ್ದ ಅಡ್ಡೆಯ ಮೇಲೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದು, ಬರೋಬ್ಬರಿ 56 ಕೆ.ಜಿ. ಗೋಮಾಂಸ ಹಾಗೂ ಕೃತ್ಯಕ್ಕೆ ಬಳಸಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ಬಳಸಲಾಗಿದ್ದ ಮನೆಯ ಆವರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಘಟನೆಯ ವಿವರ: ಫೆಬ್ರವರಿ 26ರಂದು ರಾತ್ರಿ ಹೊಸವಕ್ಲು ಎಂಬಲ್ಲಿನ ಮನೆಯೊಂದರ ಆವರಣದಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಿ ಮಾಂಸ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಐ ಸುತೇಶ್‌ ಕೆ.ಪಿ. ಅವರು ಸಿಬ್ಬಂದಿಯೊಂದಿಗೆ ಹೆಚ್. ಅಬ್ದುಲ್ ರಹಿಮಾನ್ ಎಂಬುವವರ ಮನೆಗೆ ದಾಳಿ ನಡೆಸಿದರು. ಪೊಲೀಸರನ್ನು ಕಂಡ ಕೂಡಲೇ ಮನೆಯ ಆವರಣದಲ್ಲಿದ್ದ ಇಬ್ಬರು ವ್ಯಕ್ತಿಗಳು ಪರಾರಿಯಾಗಿದ್ದಾರೆ.

ಸ್ಥಳವನ್ನು ಪರಿಶೀಲಿಸಿದಾಗ ಗೋಮಾಂಸವನ್ನು ಪ್ಯಾಕೆಟ್ ಮಾಡಿರುವುದು ಕಂಡುಬಂದಿದೆ. ಸಮೀಪದಲ್ಲಿದ್ದ ಆಟೋ ರಿಕ್ಷಾದಲ್ಲಿಯೂ ಮಾಂಸದ ಪ್ಯಾಕೆಟ್ ಪತ್ತೆಯಾಗಿದ್ದು, ಒಟ್ಟು 56 ಕೆ.ಜಿ. ಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ತೂಕದ ಯಂತ್ರ, ಆಟೋರಿಕ್ಷಾ, ಮೊಬೈಲ್ ಫೋನ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಆರೋಪಿ ಹೆಚ್. ಅಬ್ದುಲ್ ರಹಿಮಾನ್ ಜಾನುವಾರುಗಳ ವಧೆಗಾಗಿ ತನ್ನ ಮನೆಯ ಆವರಣವನ್ನೇ ಬಳಸಿಕೊಂಡಿದ್ದರಿಂದ, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡು ಆವರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಹಾಗೂ ಬಿಎನ್ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!