ಶಿವಮೊಗ್ಗ: ನಗರದ ಮೆಗ್ಗಾನ್ ಆಸ್ಪತ್ರೆಗೆ ಸೇರಿದ ಮೆಗ್ಗಾನ್ ನರ್ಸಿಂಗ್ ಕ್ವಾಟ್ರರ್ಸ್ ನಲ್ಲಿ ತಾಯಿಯೇ ಮಗಳನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ(ಅ.2) ರಾತ್ರಿ ನಡೆದಿದ್ದು, ಇಂದು(ಅ.3) ಬೆಳಗ್ಗೆ ಬೆಳಕಿಗೆ ಬಂದಿದೆ.
ಕೊಲೆಯಾದ ಬಾಲಕಿ ಪೂರ್ವಿಕಾ(11) ಹಾಗೂ ಬಾಲಕಿಯ ತಾಯಿ ಶೃತಿ(38) ಆತ್ಮಹತ್ಯೆ ಮಾಡಿಕೊಂಡವರು.
ಆರನೇ ತರಗತಿ ಓದುತ್ತಿದ್ದ ಪೂರ್ವಿಕಾಳ ತಲೆಗೆ ಮಚ್ಚಿನಿಂದ ಹೊಡೆದು ಸಾಯಿಸಿದ ಆರೋಪಿ ಶೃತಿ ಬಳಿಕ ಮಗಳ ಮೃತದೇಹದ ಮೇಲೆ ನಿಂತುಕೊಂಡ ಫ್ಯಾನ್ ಗೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೃತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಗುರುವಾರ ರಾತ್ರಿ ಈ ಕೊಲೆ ಕೃತ್ಯ ಎಸಗಿದ್ದಾಳೆ. ಶೃತಿ ಮೆಗ್ಗಾನ್ ಸಿಬ್ಬಂದಿಯೊಬ್ಬರ ಪತ್ನಿಯಾಗಿದ್ದು, ಘಟನೆ ಸಂದರ್ಭ ಪತಿ ನೈಟ್ ಶಿಫ್ಟ್ ಡ್ಯೂಟಿಯಲ್ಲಿದ್ದರು. ಬೆಳಗ್ಗೆ ಡ್ಯೂಟಿ ಮುಗಿಸಿ ಕ್ವಾಟ್ರರ್ಸ್ ಗೆ ಬಂದಾಗ ವಿಷಯ ತಿಳಿದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.