ಉತ್ತರಾಖಂಡ: ಉತ್ತರಕಾಶಿಯ ಜೋಶಿಯಾದ ಬ್ಯಾರೇಜ್ ಬಳಿ ಭಾನುವಾರ ಪತ್ರಕರ್ತ ರಾಜೀವ್ ಪ್ರತಾಪ್ ಶವವಾಗಿ ಪತ್ತೆಯಾಗಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂದು ಕುಟುಂಬ ಆರೋಪಿಸಿದೆ. ಸಾವಿಗೆ ಮುನ್ನ ಅವರಿಗೆ ಬೆದರಿಕೆ ಸಂದೇಶಗಳು ಬಂದಿದ್ದವು ಎಂದು ಕುಟುಂಬಿಕರು ಆರೋಪಿಸಿದ್ದಾರೆ. ಈ ಕುರಿತಂತೆ ಎಸ್‌ಐಟಿ (ವಿಶೇಷ ತನಿಖಾ ತಂಡ (SIT)) ನೇಮಿಸಲಾಗಿದ್ದು, ತನಿಖಾ ವರದಿಯ ಬಗ್ಗೆ ಮಾಹಿತಿ ನೀಡಿದೆ.
ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ರಾಜೀವ್ ಸಹೋದರ:
ರಾಜೀವ್ ಅವರ ಸಹೋದರನ ಪ್ರಕಾರ, “ನನ್ನ ಸಹೋದರನ ಫೋನ್ ಸ್ವಿಚ್ ಆಫ್ ಆಗುವ ಒಂದು ಅಥವಾ ಎರಡು ದಿನಗಳ ಮೊದಲು ನಾನು ಅವನೊಂದಿಗೆ ಮಾತನಾಡಿದ್ದೆ. ಆತ ಮನೆಯಲ್ಲಿದ್ದಾಗ ಕೆಲವು ಕರೆಗಳಲ್ಲಿ ‘ನೀನು ಮಾಡಿದ ವೀಡಿಯೊವನ್ನು ಅಳಿಸಿ’ ಎಂಬ ಬೆದರಿಕೆ ಹಾಕಲಾಗುತ್ತಿತ್ತು. ಅದಕ್ಕೆ ಅಂತಹ ಕರೆಗಳಿಗೆ ಆತ ಧೈರ್ಯದಿಂದ ಪ್ರತಿಕ್ರಿಯಿಸುತ್ತಿದ್ದ. ಈ ಪ್ರಕರಣವನ್ನು ರಾಜಕೀಯಗೊಳಿಸಬಾರದು. ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ಮಾಡಿ ಸತ್ಯವನ್ನು ಕಂಡುಹಿಡಿಯಬೇಕು” ಎಂದವರು ಆಗ್ರಹಿಸಿದ್ದಾರೆ.
ಭಾನುವಾರ, ಉತ್ತರಕಾಶಿ ಪೊಲೀಸ್ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯ ತಂಡ ರಾಜೀವ್ ಅವರ ಶವವನ್ನು ಜೋಶಿಯಾದ ಬ್ಯಾರೇಜ್‌ನಿಂದ ಹೊರತೆಗೆದಿದೆ. ಮರಣೋತ್ತರ ಪರೀಕ್ಷೆಯ ವರದಿ ಎದೆ ಮತ್ತು ಹೊಟ್ಟೆಯಲ್ಲಿ ಗಾಯಗಳನ್ನು ತೋರಿಸಿದೆ.
ಉತ್ತರಕಾಶಿ ಪೊಲೀಸ್ ವರಿಷ್ಠಾಧಿಕಾರಿ ಸರಿತಾ ದೋಭಾಲ್ ನೀಡಿದ ಪ್ರಕಾರ, “ಪ್ರಾಥಮಿಕ ಪರಿಶೀಲನೆಯ ಪ್ರಕಾರ, ಇದು ವಿದ್ಯುತ್ ಆಘಾತದ ಸಾಧ್ಯತೆ ತೋರಿಸುತ್ತದೆ. ಸಿಸಿಟಿವಿ ದೃಶ್ಯಾವಳಿಗಳು ರಾಜೀವ್ ಒಬ್ಬಂಟಿಯಾಗಿ ಕಾರು ಚಲಿಸುತ್ತಿರುವುದನ್ನು ದೃಢಪಡಿಸುತ್ತವೆ. ಘಟನೆ ಸೆಪ್ಟೆಂಬರ್ 28ರಂದು ರಾತ್ರಿ ಸಂಭವಿಸಿತು. ಆದರೆ ಕುಟುಂಬದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಹರಣ ಅಥವಾ ಕೊಲೆ ಕುರಿತು ಯಾವ ಸ್ಪಷ್ಟ ಪುರಾವೆಗಳೂ ದೊರಕಿಲ್ಲ, ಆದರೆ ತನಿಖೆ ಮುಂದುವರೆಯುತ್ತಿದೆ.” ಎಂದಿದ್ದರು.
ಈ ಪ್ರಕರಣವನ್ನು ಪತ್ರಕರ್ತ ಚಿರಂಜೀವ್ ಸೆಮ್ವಾಲ್ “ಸಂಶಯಾಸ್ಪದ” ಎಂದು ಆರೋಪಿಸಿದ್ದು, “ಪೂರ್ಣ ಮಾಹಿತಿಯಿಲ್ಲದೆ ನಿರ್ಣಯಕ್ಕೆ ಬರುವುದು ಸರಿಯಲ್ಲ” ಎಂದು ಹೇಳಿದ್ದಾರೆ.
ಹಿನ್ನೆಲೆ: ರಾಜೀವ್ ಸೆಪ್ಟೆಂಬರ್ 18ರಂದು ಗ್ಯಾನ್ಸೂದಿಂದ ಹೊರಟು ಸ್ನೇಹಿತನ ಕಾರಿನಲ್ಲಿ ಗಂಗೋರಿಯ ಕಡೆಗೆ ಹೋಗಿದ್ದರು. ದಿನ ಬೆಳಿಗ್ಗೆ ಸ್ಯುನಾ ಗ್ರಾಮದ ಭಾಗೀರಥಿ ನದಿಯ ಬಳಿಯಲ್ಲಿ ಅವರ ಕಾರು ಪತ್ತೆಯಾಗಿದ್ದು, ಒಳಗೆ ಅವರ ಚಪ್ಪಲಿಗಳು ಮಾತ್ರ ಕಂಡುಬಂತು. ಕುಟುಂಬವು ಅಪಹರಣದ ಶಂಕೆ ವ್ಯಕ್ತಪಡಿಸಿತ್ತು, ಇದು ಪೊಲೀಸರು ಆರಂಭಿಕ ತನಿಖೆಗೆ ಪ್ರೇರಣೆ ನೀಡಿತು.
ರಸ್ತೆ ದುರಂತವೇ ಸಾವಿಗೆ ಕಾರಣ ಎಂದ ಎಸ್‌ಐಟಿ
ಡಿಜಿಟಲ್ ಪತ್ರಕರ್ತ ರಾಜೀವ್ ಪ್ರತಾಪ್ ಸಿಂಗ್ ಸಾವಿನ ಪ್ರಕರಣದ ಕುರಿತಂತೆ ಹೊಸ ಮಾಹಿತಿ ಪ್ರಕಟಿಸಿದೆ. ರಾಜೀವ್ ಪ್ರತಾಪ್ ಸಿಂಗ್ ಸಾವಿಗೆ ರಸ್ತೆ ದುರಂತವೇ ಕಾರಣವಾಗಿದೆ. ತನಿಖೆ ತೋರಿಸಿರುವಂತೆ, ಸೆಪ್ಟೆಂಬರ್ 18ರ ರಾತ್ರಿ ರಾಜೀವ್ ಮದ್ಯ ಸೇವಿಸಿ, ವಾಹನ ಚಲಾಯಿಸುತ್ತಿದ್ದರು. ಮರಣೋತ್ತರ ವರದಿ ಕೂಡ ಇದನ್ನು ದೃಢಪಡಿಸಿದೆ ಮತ್ತು ಗಾಯಗಳು ರಸ್ತೆ ಅಪಘಾತಕ್ಕೆ ಹೊಂದಿಕೆಯಾಗುತ್ತವೆ ಎಂದು ಹೇಳಿದೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ಜನಕ್ ಸಿಂಗ್ ಪನ್ವರ್ ನೇತೃತ್ವದಲ್ಲಿ ತಂಡ ತನಿಖೆ ನಡೆಸಿದ್ದು, ಸೆಪ್ಟೆಂಬರ್ 18 ರ ಸಂಜೆ ರಾಜೀವ್ ಪ್ರತಾಪ್, ಅವರ ಸ್ನೇಹಿತ ಹೆಡ್ ಕಾನ್ಸ್‌ಟೇಬಲ್ ಸೋಬನ್ ಸಿಂಗ್ ಮತ್ತು ಕ್ಯಾಮೆರಾಮನ್ ಮನ್ಬೀರ್ ಕಲುಡಾ ಸಹಿತ, ಮಾರುಕಟ್ಟೆಗೆ ತೆರಳಿದರು. ಮಾರುಕಟ್ಟೆಯಲ್ಲಿ ಮೂರು ಜನರೂ ರಾತ್ರಿ 10 ಗಂಟೆಯವರೆಗೆ ಹೋಟೆಲ್‌ನಲ್ಲಿ ಮದ್ಯ ಸೇವಿಸಿದರು. ನಂತರ ಮನ್ಬೀರ್ ಮನೆಯಲ್ಲಿ ತೆರಳಿದಾಗ, ರಾಜೀವ್ ಸೋಬನ್ ಅವರ ಕಾರಿನಲ್ಲಿ ಗಂಗೋರಿಯ ಕಡೆಗೆ ಚಾಲನೆ ಮುಂದುವರಿಸಿದರು.
CCTV ದೃಶ್ಯಗಳು ಕೂಡ ಇದನ್ನು ತೋರಿಸುತ್ತವೆ, ರಾಜೀವ್ ಆ ಸಂದರ್ಭದಲ್ಲಿ ಪದೇ ಪದೇ ಮದ್ಯ ಸೇವಿಸುತ್ತಿದ್ದರು ಮತ್ತು ವಾಹನ ಚಾಲನೆ ಮಾಡುವುದಕ್ಕೆ ಒತ್ತಾಯಿಸುತ್ತಿದ್ದರು. ರಾತ್ರಿ 11:22ರ ಸುಮಾರಿಗೆ ಅವರು ಮಾರುಕಟ್ಟೆಯ ಹೋಟೆಲ್‌ನಿಂದ ಹೊರಬಂದು ಚಾಲನೆ ಮಾಡಿದ ನಂತರ, 11:40ಕ್ಕೆ ರಾಜೀವ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಎಸ್‌ಐಟಿ ಮಾಹಿತಿ ನೀಡಿದೆ.
ಮರಣೋತ್ತರ ವರದಿ ಪ್ರಕಾರ, ರಾಜೀವ್ ಅವರ ಎದೆ ಮತ್ತು ಹೊಟ್ಟೆಗೆ ಗಾಯಗಳು, ಪಕ್ಕೆಲುಬು ಮುರಿತಗಳು ಕಂಡುಬಂದಿವೆ. ಆದರೆ ಯಾವುದೇ ಆಯುಧ ಅಥವಾ ಹಲ್ಲೆಯ ಕುರುಹುಗಳಿಲ್ಲ. ಈ ವರದಿಯಿಂದ ರಸ್ತೆ ಅಪಘಾತವೇ ಕಾರಣ ಎನ್ನುವುದನ್ನು ದೃಢಪಡಿಸಿದ್ದಾಗಿ ತಿಳಿದುಬಂದಿದೆ.
ಉಪ ಪೊಲೀಸ್ ವರಿಷ್ಠಾಧಿಕಾರಿ ಜನಕ್ ಸಿಂಗ್ ಪನ್ವರ್ ಹೇಳಿಕೆ ನೀಡಿ, “ಸಿಸಿಟಿವಿ ದೃಶ್ಯಗಳು, ರಾಜೀವ್ ಅವರ ಕರೆ ವಿವರಗಳು ಮತ್ತು ಘಟನೆಯ ಸ್ಥಳದ ಪರಿಶೀಲನೆಯಾದ ನಂತರ, ಯಾವುದೇ ಅಪರಾಧದ ಪೂರಕ ಪುರಾವೆಗಳಿಲ್ಲ. ರಾಜೀವ್ ಪ್ರತಾಪ್ ಸಿಂಗ್ ಸಾವಿನ ಕಾರಣ ರಸ್ತೆ ಅಪಘಾತವೇ ಎಂದು ನಾವು ತೀರ್ಮಾನಿಸಿದ್ದೇವೆ.” ಎಂದಿದ್ದಾರೆ.
ರಾಜೀವ್ ಪ್ರತಾಪ್ ಯಾರು?
ರಾಜೀವ್ ಪ್ರತಾಪ್ ಸಿಂಗ್ (36) ಉತ್ತರಾಖಂಡದ ಡಿಜಿಟಲ್ ಪತ್ರಕರ್ತರು, ಯೂಟ್ಯೂಬ್ ಸುದ್ದಿ ಚಾನೆಲ್ “ದೆಹಲಿ ಉತ್ತರಾಖಂಡ್ ಲೈವ್” ಅನ್ನು ನಿರ್ವಹಿಸುತ್ತಿದ್ದರು. ಅವರು ಪತ್ರಕರ್ತರಾಗಿ ಸ್ಥಳೀಯ ಸುದ್ದಿಗಳನ್ನು ಮುಕ್ತವಾಗಿ ವರದಿ ಮಾಡುವ ಕೆಲಸವನ್ನು ಮಾಡುತ್ತಿದ್ದರು.
ಅವರು ಪತಿ ಮತ್ತು ತಂದೆಯಾಗಿ, ತಮ್ಮ ವೃತ್ತಿಜೀವನದಲ್ಲಿ ಸಾಮಾಜಿಕ ವಿಷಯಗಳ ಕುರಿತು ತನಿಖಾ ವರದಿಗಳು ಮತ್ತು ಸ್ಥಳೀಯ ಪ್ರಕರಣಗಳ ಬಗ್ಗೆ ಗಮನಾರ್ಹ ಲೇಖನಗಳನ್ನು ಪ್ರಕಟಿಸುತ್ತಿದ್ದರು. ಅವರ ಸಾವಿನ ಪ್ರಕರಣವು ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಪತ್ರಿಕಾ ಸ್ವಾತಂತ್ರ್ಯ ಮತ್ತು ಪತ್ರಕರ್ತರ ಸುರಕ್ಷತೆ ಕುರಿತಾಗಿ ಚರ್ಚೆಗಳಿಗೆ ಕಾರಣವಾಗಿದೆ. ಅವರ ವರದಿಗಳು ಸ್ಥಳೀಯ ಆಡಳಿತದ ದುರ್ಬಳಕೆ, ಭ್ರಷ್ಟಾಚಾರ ಮತ್ತು ಸಾರ್ವಜನಿಕ ಸೇವೆಗಳ ನಿರ್ವಹಣೆಯ ಕುರಿತು ಆಗಿದ್ದವು. ಈ ವರದಿಗಳಿಂದಾಗಿ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು ಎಂದು ಅವರ ಕುಟುಂಬವು ಹೇಳಿದೆ.