“ಹೆಣ್ಣಿನ ವಿಚಾರದಲ್ಲಿ ತುಟಿ ಬಿಚ್ಚದ ಎಲ್ಲ ಪಕ್ಷದ ರಾಜಕಾರಣಿಗಳೂ ನೀಚರೇ! ʻಡೆಲಿವರಿ ಬಾಯ್‌ʼಗೆ ಮದುವೆ ಮಾಡದೆ ಬಿಡಲ್ಲ: ಪ್ರತಿಭಾ ಕುಳಾಯಿ ಸವಾಲು!!!

ಮಂಗಳೂರು: ಪುತ್ತೂರಿನ ಹೆಣ್ಣುಮಗಳ ಪ್ರಕರಣದಲ್ಲಿ ಯಾಕೆ ಯಾರೂ ತುಟಿ ಬಿಚ್ಚುತ್ತಿಲ್ಲ? ಹೆಣ್ಣಿನ ವಿಚಾರದಲ್ಲಿ ತುಟಿ ಬಿಚ್ಚದ ಎಲ್ಲ ಪಕ್ಷದ ರಾಜಕಾರಣಿಗಳೂ ನೀಚರೇ…! ಆರೋಪಿ ಶ್ರೀಕೃಷ್ಣ ರಾವ್ ಮದುವೆ ಆಗುವುದಿಲ್ಲ ಅಂತ ಹೇಳಿದ್ರೆ ಅವ್ನನ್ನು ಸುಮ್ನೆ ಬಿಡಲ್ಲ.‌ ಅವನ ಮನೆಯಲ್ಲೇ ಮದುವೆ ಆಗುವತನಕ ಪ್ರತಿಭಟನೆ ಮಾಡ್ತೇವೆ. ನೀವಿದನ್ನು ಬೆದರಿಕೆ ಅಂತ ಬೇಕಾದ್ರೂ ತಿಳಿಯಿರಿ… ಕೇಸ್ ಹಾಕಿದ್ರೂ ಕೇರ್ ಮಾಡಲ್ಲ” ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಸವಾಲು ಹಾಕಿದ್ದಾರೆ.

ಪುತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಪ್ರೀತಿಸಿ ವಂಚಿಸಿದ ಪ್ರಕರಣದ ಡಿಎನ್‌ಎ ವರದಿ ಬಂದಿದ್ದು, ಯುವತಿ ಆಪಾದಿಸಿದ ಯುವಕನ ಡಿಎನ್‌ಎ ಸಾಬೀತಾಗಿದೆ. ಆರೋಪಿ ಯುವಕ ಕೃಷ್ಣ ಜೆ ರಾವ್‌ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದು, ಯುವಕನ ಹೆತ್ತವರು ಮಗನಿಗೆ ಯುವತಿಯ ಜತೆ ಮದುವೆ ಮಾಡುವ ಮನಸು ಮಾಡಬೇಕು ಎಂದು ರಾಜ್ಯ ವಿಶ್ವಕರ್ಮ ಮಹಾಮಂಡಲದ ಅಧ್ಯಕ್ಷ ಕೆಪಿ ನಂಜುಂಡಿ ಮಾಹಿತಿ ಬಹಿರಂಗಪಡಿಸಿದ್ದರು.

ಇದಕ್ಕಿಂತ ಮುಂಚೆ ಸಂತ್ರಸ್ಥ ಯುವತಿಗೆ ನ್ಯಾಯ ಒದಗಿಸುವುದಾಗಿ ಟೊಂಕ ಕಟ್ಟಿಕೊಂಡು ನಿಂತಿದ್ದ ಪ್ರತಿಭಾ ಕುಳಾಯಿ, ಡಿಎನ್‌ಎ ವರದಿ ಶ್ರೀಕೃಷ್ಣ ಜೆ. ರಾವ್‌ಗೆ ಮ್ಯಾಚ್‌ ಆದರೆ ಮದುವೆ ಮಾಡಿಕೊಡುವುದಾಗಿ ಸವಾಲು ಹಾಕಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ತಮ್ಮ ಮುಂದಿನ ನಿರ್ಧಾರಗಳ ಬಗ್ಗೆ ತಿಳಿಸಿದ ಅವರು, ಸಂತ್ರಸ್ಥ ಯುವತಿ ಜೊತೆಗೆ ಶ್ರೀಕೃಷ್ಣ ಜೆ ರಾವ್‌ಗೆ ಮದುವೆ ಮಾಡಿಸುವುದಾಗಿ ಸವಾಲು ಹಾಕಿದ್ದಾರೆ. ಅಲ್ಲದೆ ಪ್ರಕರಣದ ಕುರಿತಂತೆ ನ್ಯಾಯ ಕೊಡಿಸಲು ವಿಫಲರಾದ ಹಿಂದೂ ಸಂಘಟನೆಗಳಿಗೆ, ಕಾಂಗ್ರೆಸ್‌ ಸಹಿತ ಎಲ್ಲಾ ಪಕ್ಷದ ರಾಜಕಾರಣಿಗಳಿಗೆ ಸರಿಯಾಗಿ ಟಾಂಗ್‌ ನೀಡಿದ್ದಾರೆ.

ಒಂದು ಮಗುವಿಗೆ ನ್ಯಾಯ ಕೊಡಿಸಲು ಆಗ್ತಿಲ್ವಾ?
ಪ್ರಕರಣದ ಕುರಿತಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‌ಡಿಪಿಐ ಯಾರೂ ಯಾಕೆ ಮಾತಾಡ್ತಿಲ್ಲ, ಹಾಗಾಗಿ ಎಲ್ಲರೂ ನೀಚರೇ! ಎಂದು ಹೇಳಿದ್ದಾರೆ. “ಭಾಷಣದಲ್ಲಿ ಹಿಂದೂಗಳು ಹತ್ತು ಮಕ್ಕಳು ಹುಟ್ಟಿಸಿ ಎನ್ನುತ್ತಾರೆ, ಆದರೆ ಈಗ ಒಂದು ಮಗುವಿಗೆ ನ್ಯಾಯ ಕೊಡಲು ಆಗುತ್ತಿಲ್ಲ. ನಮ್ಮ ಸಮಾಜದಲ್ಲಿ ಯಾರೂ ಗಂಡಸರಿಲ್ವಾ ಎಂದು ಪ್ರತಿಭಾ ಪ್ರಶ್ನಿಸಿದ್ದಾರೆ.

ನೀವಿದನ್ನು ವಾರ್ನಿಂಗ್, ಥ್ರೆಟ್ ಏನ್ ಬೇಕಾದ್ರೂ ಅನ್ಕೊಳ್ಳಿ, ನನ್ ಮೇಲೆ ಕೇಸ್ ಬೇಕಾದ್ರೂ ಹಾಕಿ, ಅವನು ಮದುವೆ ಆಗುವುದಿಲ್ಲ ಅಂತ ಹೇಳಿದ್ರೆ ಅವ್ನನ್ನು ಸುಮ್ನೆ ಬಿಡಲ್ಲ…. ಅವನ ಮನೆಯಲ್ಲೇ ಮದುವೆ ಆಗುವತನಕ ಪ್ರತಿಭಟನೆ ಮಾಡ್ತೇವೆ… ನೀವಿದನ್ನು ಬೆದರಿಕೆ ಅಂತ ಬೇಕಾದ್ರೂ ತಿಳಿಯಿರಿ ಕೇಸ್ ಹಾಕಿದ್ರೂ ಕೇರ್ ಮಾಡಲ್ಲ…


ಒಬ್ಬಳು ಮಹಿಳೆಯಾಗಿ ಹೇಗೆ ಮದುವೆ ಮಾಡಿ ಕೊಡಿಸುತ್ತೇನೆ ಎಂದು ತೋರಿಸಿಕೊಡುತ್ತೇನೆ. ಅಮಾಯಕ ಯುವತಿಗೆ ನ್ಯಾಯ ದೊರಕಿಸಿಕೊಡುವುದೇ ನಮ್ಮ ಉದ್ದೇಶ ಎಂದು ಸವಾಲು ಹಾಕಿದ್ದಾರೆ.

ಇದು ಸಮಾಜಕ್ಕೆ ಒಂದು ಪಾಠವಾಗಬೇಕು. ಈಗ ಪುತ್ತೂರಲ್ಲಿ ಇದ್ದಾನಲ್ಲಾ ಅವನ ಮನಗೆ ಹೋಗಿ ಅವನನ್ನು ಎಳೆದುಕೊಂಡು ಬಂದು ಮದುವೆ ಮಾಡಿಸಿ. ಅವನು ಬಾಳ್ತಾನಾ ಇಲ್ವಾ ಅನ್ನೋದು ಆಮೇಲಿನ ಪ್ರಶ್ನೆ. ಇಷ್ಟೊಂದು ದಿನ ತಾಳ್ಮೆಯಿಂದ ಇದ್ದೆವು. ಅವನೀಗ ಕಾಲೇಜ್‌ಗೆ ಹೋಗ್ತಾ ಇದ್ದಾನೆ. ಬಾಯಲ್ಲಿ ಚಿಂಗಂ ಹಾಕಿ ಕಿಸೆಗೆ ಕೈ ಹಾಕಿ ದೊಡ್ಡ ಘನಕಾರ್ಯ ಮಾಡಿದಂಗೆ ವರ್ತಿಸ್ತಾನೆ ಎಂದರು.

“ಸೋ ಕಾಲ್ಡ್ ಹಿಂದೂ ಮುಖಂಡರೇ ಹಿಂದೂ ಹೆಣ್ಣುಮಗಳಿಗೆ ನ್ಯಾಯ ಇಲ್ವಾ? ಹಿಂದೂ-ಮುಸ್ಲಿಂ ಆಗಿದ್ರೆ ಇಷ್ಟರಲ್ಲಿ ಜಿಲ್ಲೆಗೆ ಬೆಂಕಿ ಬೀಳ್ತಾ ಇತ್ತು. ಆದರೆ ಯಾಕೆ ಯಾರೂ ಸಹ ಮಾತಾಡುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಪ್ರಕರಣ ಇದೀಗ ಕೋರ್ಟಿನಲ್ಲಿ ಇದೆ. ಅವನು ಕೋರ್ಟಿನಲ್ಲಿ ಯಾವ ಹೇಳಿಕೆ ಕೊಡ್ತಾನೆ ಎಂದು ನೋಡ್ತೇನೆ. ಅವನ ಅಪ್ಪ-ಅಮ್ಮನಿಗೆ ಸಮಾಜದ ಭಯ ಇಲ್ಲ ಅಂತ ಆಯಿತು ಎಂದು ಆರೋಪಿಸಿದ್ದಲ್ಲದೆ, ಮದುವೆಯ ಸಂಪೂರ್ಣ ಖರ್ಚನ್ನು ತಾನೇ ವಹಿಸುವುದಾಗಿ ಹೇಳಿದ್ದಾರೆ.

ಹೀಗಾಗಿ ಪ್ರತಿಭಾ ಕುಳಾಯಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದ್ದು, ಸಂತ್ರಸ್ಥ ಯುವತಿಗೂ ಶ್ರೀಕೃಷ್ಣ ಜೆ. ರಾವ್‌ಗೆ ಪರಸ್ಪರ ಮದುವೆ ಮಾಡಿಸ್ತಾರಾ? ಯಾವ ರೀತಿ ಇರುತ್ತದೆ ಅವರ ಹೋರಾಟ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಸಂತ್ರಸ್ತೆ ತಾಯಿ ನಮಿತಾ, ಆಚಾರ್ಯ ಸಮುದಾಯದ ಮುಖಂಡೆ ಅರ್ಚನಾ ಉಪಸ್ಥಿತರಿದ್ದರು.

 

error: Content is protected !!