ಮಡಿಕೇರಿ: ಕೊಡಗು ಮಣ್ಣಿನಲ್ಲಿ ಅಸಾಧಾರಣ ದೃಶ್ಯ ಕಂಡುಬಂದಿದೆ. ಹೆಂಡತಿಗೆ ಡಿವೋರ್ಸ್ ಕೊಟ್ರೆ ಕೆಲವರು ನೋವು ಅನುಭವಿಸಿದ್ರೆ ಇಲ್ಲೊಬ್ಬ ಹಾಲಿನ ಸ್ನಾನದಿಂದ ಸಂಭ್ರಮಿಸಿ ಮೆರವಣಿಗೆ ಹೊರಟಿದ್ದಾನೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೌಂಡ್ ಸಿಸ್ಟಂ ಧುಮ್… ಧಾಮ್.. ಹಾಡು ಜೋರಾಗಿತ್ತು. ಜನರ ಕುತೂಹಲದಿಂದ ನೋಡಿದ್ರೆ ಹೆಂಡ್ತಿ ಡಿವೋರ್ಸ್ ಕೊಟ್ಳು ಅಂತ ಸಂತಸದಿಂದ ಕಿರುಚಾಡಿ ಹಾಲಿನ ಸ್ನಾನ ಮಾಡಿದ್ದಾನೆ. ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಬ್ಯಾರೆಲ್ ತುಂಬ ಹಾಲು. ಮಧ್ಯೆ ಆ ವ್ಯಕ್ತಿಯ ಕುಣಿತ! “ನಾನು ಫ್ರೀ… ನಾನು ಸ್ವತಂತ್ರ!” ಎಂದು ಹಾಡುತ್ತಿದ್ದ.
ಹಾಲಿನ ಸ್ನಾನ, ಪೋಸ್ಟರ್, ಡ್ಯಾನ್ಸ್ – ಇವೆಲ್ಲವೂ ಸೇರಿ ಸಿನಿಮಾ ಶೂಟಿಂಗ್ ಸೆಟ್ ಅನ್ನಿಸಿದ್ರೂ ಇದು ನಿಜ ಘಟನೆ. “ಹೆಂಡತಿಗೆ ವಿಚ್ಛೇದನ ಕೊಟ್ಟಿದ್ದಕ್ಕೆ ಈ ಸಂತಸ” ಎಂದು ಬೋರ್ಡ್ ಹಾಕಿಸಿಕೊಂಡು ಮೈಮೇಲೆ ಹಾಲು ಸುರಿದು, ಕುಣಿದು ಕುಪ್ಪಳಿಸಿದ ಆತನ ವಿಡಿಯೋ ಈಗ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ.
ಮಡಿಕೇರಿ ದಸರಾ ಹಬ್ಬದ ಹೈಲೈಟ್ ಆಗಿ ಈ ದೃಶ್ಯವೂ ಸೇರಿಕೊಂಡಿದೆ. ರಾಮಾಯಣ, ಯಕ್ಷಗಾನ, ಹುಲಿ ಕುಣಿತ, ಆರ್‌ಸಿಬಿ ಕಪ್ ಗೆಲುವು, ಗೊಂಬೆಗಳ ಕುಣಿತ—ಈ ಎಲ್ಲಾ ಕಲೆಪರಂಪರೆಯ ನಡುವೆ ಒಬ್ಬನ ವೈವಾಹಿಕ ಜೀವನದ ಎಕ್ಸಿಟ್ ಪಾರ್ಟಿ ಕೂಡ ಮೆರವಣಿಗೆಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿಬಿಟ್ಟಿದೆ!
ಸಾಮಾನ್ಯವಾಗಿ “ಗಂಡ-ಹೆಂಡತಿ ಜಗಳ ಉಂಡು ಮಲಗೋವರೆಗೆ” ಎನ್ನುತ್ತಿದ್ದ ಹಿರಿಯರ ಮಾತು, ಇಂದಿನ ಕಾಲದಲ್ಲಿ “ಮಲಗೋವರೆಗೆ ಜಗಳ—ಮುಂದಿನ ದಿನ ಡಿವೋರ್ಸ್” ಆಗುತ್ತಿರುವಂತಿದೆ. ಈ ಹಾಲಿನ ಸ್ನಾನ ಮೆರವಣಿಗೆ, ಗ್ರಾಮೀಣ ಸಮಾಜದಲ್ಲಿ ಡಿವೋರ್ಸ್ ಸಂಸ್ಕೃತಿಯೂ ಹೊಸ ಹಬ್ಬದ ವೇಷ ತೊಟ್ಟಂತಾಗಿದೆ.