ಉಡುಪಿ: ತಾಲೂಕು ಪೆರ್ನಾಲ್-ಪಿಲಾರುಕಾನಾದಲ್ಲಿ ರಸ್ತೆ ಹಾಳಾಗಿರುವುದನ್ನು ಗಮನ ಸೆಳೆಯಲು ನಾಗರಿಕರು ಹಲವು ದಿನಗಳಿಂದ ಒತ್ತಾಯ ವ್ಯಕ್ತಪಡಿಸಿದರೂ, ಸಂಬಂಧಪಟ್ಟ ಇಲಾಖೆಯು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತ ನಾಗರಿಕರು ಸೆಪ್ಟೆಂಬರ್ 29ರಂದು ತಾವೇ ರಸ್ತೆ ರಿಪೇರಿ ಕಾರ್ಯ ಆರಂಭಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಆತ್ರಾಡಿ–ಶಿರ್ವಾ–ಬಜ್ಪೆ ರಾಜ್ಯ ಹೆದ್ದಾರಿಯ ಹಲವು ಕಿಲೋಮೀಟರ್ ರಸ್ತೆ ಹೊಂಡಗುಂಡಿಗಳಿಂದ ಹಾಳಾಗಿದ್ದು, ಪ್ರತಿದಿನ ಹಲವಾರು ಸವಾರರು ಅಪಘಾತದ ಅಪಾಯ ಎದುರಿಸುತ್ತಿದ್ದಾರೆ. ಇತ್ತೀಚೆಗೆ ನಾಗರಿಕರು ಗಮನ ಸೆಳೆಯಲು ರಸ್ತೆ ಹೊಂಡಗಳನ್ನು ಮುಚ್ಚಿದರೂ, ತಕ್ಷಣಿಕವಾಗಿ ಕೆಲವೆಡೆ ಜೆಸಿಬಿ ಮೂಲಕ ಸಮತಟ್ಟು ಮಾಡಿದ ಹೊರತು, ಸಂಪೂರ್ಣ ದುರಸ್ತಿ ಕಾರ್ಯ ಪ್ರಾರಂಭವಾಗಿಲ್ಲ.
ಈ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಸ್ವತಃ ಸಿಮೆಂಟ್, ಮರಳು ಖರೀದಿಸಿ ರೆಡಿ ಮಿಕ್ಸ್ ತಯಾರಿಸಿ ಹೊಂಡಗಳನ್ನು ತುಂಬಿದರು. “ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಇದು ಎಚ್ಚರಿಕೆ ಕ್ರಮವಾಗಿದೆ” ಎಂದು ಪ್ರತಿಭಟನೆಯಲ್ಲಿ ಭಾಗಿಯಾದ ಡಾ. ಮೆಲ್ವಿನ್ ಕ್ಯಾಸ್ತಲಿನೊ ತಿಳಿಸಿದರು.
“ಮತ ಕೇಳಲು ಬರುವ ಜನಪ್ರತಿನಿಧಿಗಳು ಈಗ ಮೌನವಾಗಿದ್ದಾರೆ. ಸರಕಾರದಿಂದ ಸಾಧ್ಯವಾಗದಿದ್ದರೆ ನಾವು ಸ್ವತಃ ರಸ್ತೆ ತಿದ್ದಲು ಮುಂದಾಗುತ್ತೇವೆ” ಎಂದು ಡಿಜೆ ಸುಜಯ್ ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ಮಹಿಳಾ ಸಂಘಟನೆಗಳೂ ಪಾಲ್ಗೊಂಡಿದ್ದು, ಒಜ್ಜಾಲ್ಡ್ ಲೋಬೊ, ವಿಲ್ಫಡ್ ಕ್ಯಾಸ್ತೆಲಿ, ವ್ಯಾಲೆಂಟಿಯಸ್ ಡಿಸೋಜಾ, ಲಾರೆನ್ಸ್ ಕೊರೆಯಾ, ಸಂದೀಪ್ ಮೆಂಡೊನ್ಸಾ, ಎಲಿಯಾಸ್ ಡಿಸೋಜಾ, ಅಶೋಕ್ ಲೋಬೊ, ಪ್ರಕಾಶ್ ಮಥಾಯಸ್, ಸಿಂಧಿಯಾ ಮತ್ತಿತರರು ಹಾಜರಿದ್ದರು.