ಮಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭವಾಗುತ್ತಿದ್ದಂತೆಯೇ ಮನೆಗೆ ಪ್ರವೇಶಿಸಿದ ತುಳುನಾಡಿನ ಯೂಟ್ಯೂಬರ್ ರಕ್ಷಿತಾ ಶೆಟ್ಟಿ, ಅಚ್ಚರಿಯಂತೆ ತಕ್ಷಣವೇ ಎಲಿಮಿನೇಟ್ ಆಗಿದ್ದರು. ಸ್ಪರ್ಧಿ ಮನೆ ಸೇರಿ 24 ಗಂಟೆಯೊಳಗೆ ಹೊರ ಬಂದ ಘಟನೆ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತು.

ರಕ್ಷಿತಾ ಶೆಟ್ಟಿ ಅವರು ಯೂಟ್ಯೂಬ್ ಮೂಲಕ ಜನಪ್ರಿಯತೆ ಪಡೆದ ಯುವತಿ. “ಬಲೆ ಬಲೆ ಗಯ್ಸ್” ಅಂತ ಹೇಳುತ್ತಾ ವಿಡಿಯೋ ಮಾಡುವ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅವರು, ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿನ ದಿನಗಳ ಕಾಲ ಉಳಿಯುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಆ ನಿರೀಕ್ಷೆಗೆ ತಕ್ಷಣವೇ ಬ್ರೇಕ್ ಬಿದ್ದಿತು.
ಇದೀಗ ಅವರು ಮರುಪ್ರವೇಶ ಮಾಡುವ ಸಾಧ್ಯತೆಯ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಕಾರಣ, ತಮಿಳು ಬಿಗ್ ಬಾಸ್ ಸೀಸನ್ 8ರಲ್ಲಿ ಇದೇ ರೀತಿ ನಡೆದಿತ್ತು. ನಟಿ ಸಂಚನಾ ನಮಿದಾಸ್ ಅವರನ್ನು ಕಾರ್ಯಕ್ರಮ ಆರಂಭವಾದ 24 ಗಂಟೆಯೊಳಗೆ ಎಲಿಮಿನೇಟ್ ಮಾಡಲಾಗಿತ್ತು. ಆದರೆ ನಂತರ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಅವರು ಮನೆಗೆ ಪುನಃ ಬಂದಿದ್ದರು.

ಅದರಂತೆ ಕನ್ನಡ ಬಿಗ್ ಬಾಸ್ ಸೀಸನ್ 12ರಲ್ಲೂ ಇದೇ ಬೆಳವಣಿಗೆ ನಡೆಯಬಹುದೇ ಎಂಬ ಕುತೂಹಲ ಹುಟ್ಟಿಕೊಂಡಿದೆ. ರಕ್ಷಿತಾ ಶೆಟ್ಟಿ ಅವರ ಅಭಿಮಾನಿಗಳು “ಅವರು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಹಿಂತಿರುಗಲೇಬೇಕು” ಎಂಬ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯೊಳಗಿನ ಮುಂದಿನ ತಿರುವುಗಳನ್ನು ಎಲ್ಲರೂ ಕಾತರದಿಂದ ಕಾದು ನೋಡುತ್ತಿದ್ದಾರೆ.
