ಶಿಮ್ಲಾ: ಮನೆಯೊಳಗೆ ಪ್ರವೇಶಿಸಿದ್ದಕ್ಕೆ ಮೈಲಿಗೆಯಾಯಿತೆಂದು ಮೇಲ್ಜಾತಿಯ ಮಹಿಳೆಯೊಬ್ಬರು 12 ವರ್ಷದ ದಲಿತ ಬಾಲಕನನ್ನು ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದರಿಂದ, ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಮ್ಲಾ ಜಿಲ್ಲೆಯ ರೊಹ್ರು ತಾಲ್ಲೂಕಿನಲ್ಲಿ ನಡೆದಿದೆ .
ಮೃತ ಬಾಲಕನನ್ನು ಸುರೇಶ್ ಬಂತ ಎಂದು ಗುರುತಿಸಲಾಗಿದೆ.
ಈ ಘಟನೆಯ ವಿರುದ್ಧ ಸ್ಥಳೀಯ ಸಮುದಾಯಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಮೃತ ಬಾಲಕನ ಚಿಕ್ಕಪ್ಪನ ಪ್ರಕಾರ, ಸುರೇಶ್ ಬಂತ ನೆರೆಮನೆಯೊಳಕ್ಕೆ ಹೋಗಿದ್ದ. ಆತ ತನ್ನ ಮನೆಗೆ ಬಂದಿದ್ದರಿಂದ ಮನೆ ಮೈಲಿಗೆಯಾಯಿತೆಂದು ದೂಷಿಸಿದ ಆ ಮನೆಯ ಒಡತಿ, ಆತನನ್ನು ಕೊಟ್ಟಿಗೆಯೊಂದರಲ್ಲಿ ಕೂಡಿ ಹಾಕಿದ್ದಾಳೆ. ಬಳಿಕ, ಮನೆಯನ್ನು ಶುದ್ಧಗೊಳಿಸಲು ನನಗೆ ನಿನ್ನ ಪೋಷಕರು ಮೇಕೆಯನ್ನು ನೀಡಬೇಕು ಎಂದು ಆತನಿಗೆ ಸೂಚಿಸಿದ್ದಾಳೆ ಎನ್ನಲಾಗಿದೆ.
ಕೊಟ್ಟಿಗೆಯಿಂದ ಹೇಗೋ ತಪ್ಪಿಸಿಕೊಂಡು ಮನೆಗೆ ಬಂದಿರುವ ಸುರೇಶ್ ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮರು ದಿನ ಮೃತಪಟ್ಟಿದ್ದಾನೆ.