ಕುಡ್ಲ ಪಿಲಿಪರ್ಬ ಉದ್ಘಾಟನೆ: ಘರ್ಜಿಸಿದ ಹುಲಿಗಳು

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಆಯೋಜನೆಯಲ್ಲಿ ನಳಿನ್ ಕುಮಾರ್ ಕಟೀಲರ ಮಾರ್ಗದರ್ಶನ ಮತ್ತು ಶಾಸಕ ಡಿ. ವೇದವ್ಯಾಸ ಕಾಮತರ ನೇತೃತ್ವದಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲಿ “ಕುಡ್ಲ ಪಿಲಿಪರ್ಬ-2025 ಸೀಸನ್ 4” ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು.

ಪಿಲಿಪರ್ಬವು ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ ಕಲೆಯನ್ನು ಸಂರಕ್ಷಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಈ ಬಾರಿ ಸ್ಪರ್ಧಾಕೂಟ ರೂಪದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ 10 ಹುಲಿವೇಷ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿವೆ ಎಂದು ವೇದವ್ಯಾಸ ಕಾಮತ್‌ ಹೇಳಿದರು.

ಹಿರಿಯ ಹಾಗೂ ಅನುಭವಿ ತೀರ್ಪುಗಾರರ ಸಮ್ಮುಖದಲ್ಲಿ ಸ್ಪರ್ಧೆ ನಡೆಯುತ್ತಿರುವುದು ವಿಶೇಷವಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಗಣ್ಯರು ಹಾಜರಾಗಿದ್ದು, ಭಾಗವಹಿಸಿರುವ ತಂಡಗಳಿಗೆ ಶುಭ ಹಾರೈಸಿದರು ಮತ್ತು ಪ್ರೋತ್ಸಾಹವನ್ನು ನೀಡಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಸಂಸದ ಬ್ರಿಜೇಶ್ ಚೌಟ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ವಿಠ್ಠಲ್ ಕುಲಾಲ್ (ವಿ.ಕೆ ಫರ್ನಿಚರ್ಸ್), ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ ಮತ್ತು ಅನೇಕ ಸಾಮಾಜಿಕ ಮತ್ತು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ಸ್ಪರ್ಧಾಕೂಟ ಇಂದು ರಾತ್ರಿ ವರೆಗೆ ನಡೆಯಲಿದೆ ಮತ್ತು ಅಂತಿಮವಾಗಿ ವಿಜೇತ ತಂಡವನ್ನು ಘೋಷಿಸಲಾಗುವುದು. ಕಾರ್ಯಕ್ರಮವು ತುಳುನಾಡಿನ ಪರಂಪರೆಯನ್ನು ಉಳಿಸುವಲ್ಲಿ, ಸ್ಥಳೀಯ ಪ್ರತಿಭೆಯನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಸಮುದಾಯದಲ್ಲಿ ಸಾಂಸ್ಕೃತಿಕ ಬಾಂಧವ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

error: Content is protected !!