ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು

ತ್ರಿಶೂರ್: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯಲಾಗುವುದು ಎಂದು ಟಿವಿ ಚರ್ಚೆಯಲ್ಲಿ ಬೆದರಿಕೆ ಹಾಕಿದ್ದ ಕೇರಳ ಬಿಜೆಪಿ ನಾಯಕ ಪ್ರಿಂಟು ಮಹಾದೇವನ್ ವಿರುದ್ಧ ಪೆರಮಂಗಲಂ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೇರಳ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಶ್ರೀಕುಮಾರ್ ಸಿ.ಸಿ. ಹಾಗೂ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಗೋಕುಲ್ ಗುರುವಾಯೂರ್ ಸಲ್ಲಿಸಿದ್ದ ದೂರನ್ನು ಆಧರಿಸಿ ಈ ಪ್ರಕರಣ ದಾಖಲಾಗಿದೆ.

ಮಲಯಾಳಂ ಸುದ್ದಿ ವಾಹಿನಿಯೊಂದರಲ್ಲಿ ಸೆ.26 ರಂದು ಬಾಂಗ್ಲಾದೇಶ ಮತ್ತು ನೇಪಾಳದಲ್ಲಿನ ಪ್ರತಿಭಟನೆಗಳ ಕುರಿತು ನಡೆದ ಚರ್ಚೆಯ ವೇಳೆ ಮಾಜಿ ಎಬಿವಿಪಿ ನಾಯಕರೂ ಆದ ಪ್ರಿಂಟು ಮಹಾದೇವನ್ ಮೇಲಿನಂತೆ ಹೇಳಿಕೆ ನೀಡಿದ್ದರು. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಿಂಟು ಮಹಾದೇವನ್, ಜನರು ಪ್ರಧಾನಿ ನರೇಂದ್ರ ಮೋದಿಯ ಬೆನ್ನಿಗೆ ನಿಂತಿರುವುದರಿಂದ, ಭಾರತದಲ್ಲಿ ಅಂತಹ ಪ್ರತಿಭಟನೆಗಳು ನಡೆಯಲು ಸಾಧ್ಯವಿಲ್ಲ. ಒಂದು ವೇಳೆ ರಾಹುಲ್ ಗಾಂಧಿ ಅವರಿಗೇನಾದರೂ ಅಂತಹ ಬಯಕೆಗಳಿದ್ದರೆ, ಅವರ ಎದೆಗೆ ಗುಂಡು ಹೊಡೆಯಲಾಗುವುದು ಎಂದು ಬೆದರಿಕೆ ಒಡ್ಡಿದ್ದರು.

ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!