ಬಲೂಚಿಸ್ತಾನ: ಮಂಗಳವಾರ ಬೆಳಗ್ಗೆ ಕ್ವೆಟ್ಟಾದಲ್ಲಿ ಫ್ರಾಂಟಿಯರ್ ಕಾನ್ಸ್ಟ್ಯಾಬ್ಯುಲರಿ (ಎಫ್‌ಸಿ) ಪ್ರಧಾನ ಕಚೇರಿ ಹೊರಗೆ ಭೀಕರ ಕಾರ್ ಬಾಂಬ್ ದಾಳಿ ನಡೆದಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿ, 33 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪ್ರಬಲ ಸ್ಫೋಟ, ಆನಂತರದಲ್ಲಿ ಉಂಟಾದ ಗೊಂದಲ, ಗುಂಡಿನ ಚಕಮಕಿಯ ಭಯಾನಕ ಘಟನೆಗಳು ನಡೆದಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಬಲೂಚಿಸ್ತಾನ್ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಮುಜೀಬುರ್ ರೆಹಮಾನ್ ತಿಳಿಸಿದ್ದಾರೆ: “ಕ್ವೆಟ್ಟಾ ಸಿವಿಲ್ ಆಸ್ಪತ್ರೆ, ಬಲೂಚಿಸ್ತಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಆಘಾತ ಕೇಂದ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.”
ಆರೋಗ್ಯ ಇಲಾಖೆಯ ಮಾಧ್ಯಮ ಸಂಯೋಜಕ ಡಾ. ವಸೀಮ್ ಬೇಗ್ ತಿಳಿಸಿದ್ದಾರೆ, ಹೆಚ್ಚಿನ ಚಿಕಿತ್ಸೆಗೆ 19 ಗಾಯಾಳುಗಳನ್ನು ನಾಗರಿಕ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆತರಲಾಗಿದೆ. ಡಾ. ಅರ್ಬಾಬ್ ಕಮ್ರಾನ್ ಮತ್ತು ಡಾ. ಹಾದಿ ಕಾಕರ್ ಸೇರಿದಂತೆ ಹಿರಿಯ ವೈದ್ಯಕೀಯ ಸಿಬ್ಬಂದಿ ತುರ್ತು ಪ್ರತಿಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಪ್ರಮುಖವಾಗಿ, ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಆದರೂ ಬಲೂಚಿಸ್ತಾನದಲ್ಲಿನ ಪ್ರತ್ಯೇಕತಾವಾದಿ ಸಂಘಟನೆ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಈ ದಾಳಿಯೊಂದಿಗೆ ಸಂಬಂಧ ಹೊಂದಿರುವ ಸಾಧ್ಯತೆ ಇರುವ ಬಗ್ಗೆ ಅಧಿಕಾರಿಗಳು ಶಂಕಿಸಿದ್ದಾರೆ. ಈ ಸಂಘಟನೆ ಹಿಂದಿನಲ್ಲಿಯೂ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡಿದೆ.
ಬಲೂಚಿಸ್ತಾನದ ಪ್ರಾಂತೀಯ ಆರೋಗ್ಯ ಸಚಿವ ಬಖತ್ ಕಾಕರ್ ಪ್ರಕಾರ “ಬಹುಶಃ ಹಲವಾರು ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆʼ ಎಂದಿದ್ದಾರೆ.