ಮಂಗಳೂರು: ತುಳುನಾಡಿನ ಹಿರಿಯ ಹುಲಿ ವೇಷ ಕಲಾವಿದ ಹಾಗೂ ಸಂಘಟಕ ಬಜಲಕೇರಿ ಕಮಲಾಕ್ಷರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ʻಚಾವಡಿ ತಮ್ಮನʼ ಗೌರವವನ್ನು ಸೋಮವಾರ ಪ್ರದಾನ ಮಾಡಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ ಈ ಕಾರ್ಯಕ್ರಮ ಮಂಗಳೂರು ನಗರದ ಮಣ್ಣಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಜಿಲಕೇರಿ ಕಮಲಾಕ್ಷ, ನನ್ನ ತಂದೆಯ ಕಾಲದಿಂದ ಹುಲಿವೇಷವನ್ನು ಸಾಂಪ್ರದಾಯಿಕವಾಗಿ ಹಾಗೂ ನಿಷ್ಠೆಯಿಂದ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದರು. ಹಿಂದಿನ ಕಾಲದಲ್ಲಿ ಕಡಿಮೆ ವೆಚ್ಚದಲ್ಲಿ ವೇಷ ನಡೆಯುತ್ತಿತ್ತು, ಈಗ ತುಂಬಾ ದುಬಾರಿಯಾಗಿದೆ ಎಂದು ಅಭಿಪ್ರಾಯಿಸಿದರು. ಅಲ್ಲದೆ ಹಿಂದೆ ಊದು ಪೂಜೆ ಎಂಬ ಸಂಪ್ರದಾಯ ಇರಲಿಲ್ಲ, ಈಗ ಕೆಲವೆಲ್ಲ ವಿಚಾರಗಳು ಬದಲಾಗಿದೆ, ಹುಲಿ ವೇಷಧಾರಿಗಳ ಮೈ ಮೇಲೆ ದೈವ ಅಥವಾ ಬೇರೆ ಯಾವುದೇ ಶಕ್ತಿಗಳು ಬರುವುದು ಸಾಧ್ಯವೇ ಇಲ್ಲ ಎಂದು ಕಮಲಾಕ್ಷ ಅವರು ಖಡಾ ಖಂಡಿತವಾಗಿ ಹೇಳಿದರು. ತುಳು ಅಕಾಡೆಮಿಯ ಚಾವಡಿ ತಮ್ಮನದ ಗೌರವ ಅತೀವ ಖುಷಿ ಕೊಟ್ಟಿದೆ ಎಂದು ಕಮಲಾಕ್ಷ ಅವರು ಅಭಿಪ್ರಾಯಪಟ್ಟರು.
ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗ್ಡೆ ಅಭಿನಂದನಾ ಭಾಷಣ ಮಾಡಿ, ತುಳುನಾಡಿನಂತಹ ಶ್ರೀಮಂತ ಬಹು ಸಂಸ್ಕೃತಿ ದೇಶದ ಬೇರೆಲ್ಲೂ ಇಲ್ಲ. ಹುಲಿ ಕುಣಿತವು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುವಲ್ಲಿ ಕಮಲಾಕ್ಷರ ಕೊಡುಗೆ ಅಪೂರ್ವವಾದುದು. ಕಬಡ್ಡಿ ಕ್ರೀಡೆ ಸಂಘಟಿಸುವಲ್ಲೂ ಕಮಲಾಕ್ಷರು ಬಹುವಾಗಿ ಶ್ರಮಿಸಿದವರು ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ನಾಡಿನ ಜಾನಪದ ಲೋಕದಲ್ಲಿ ಹುಲಿ ವೇಷ ಕುಣಿತ ಮಹತ್ವವಾದದ್ದು, ಹುಲಿ ಕುಣಿತಕ್ಕೆ ಬಜಿಲಕೇರಿ ಕಮಲಾಕ್ಷ ಅವರು ನೀಡಿರುವ ಸೇವೆಗೆ ಅವರ ಊರಿನ ಜನರ ಸಮ್ಮುಖದಲ್ಲಿ ಚಾವಡಿ ತಮ್ಮನದ ಮೂಲಕ ಸನ್ಮಾನಿಸಿರುವುದು ಹುಲಿವೇಷ ಕಲೆಯ ಬಗ್ಗೆ ಹಾಗೂ ಕಲಾವಿದರ ಬಗೆಗಿನ ಗೌರವದ ದ್ಯೋತಕವಾಗಿದೆ ಎಂದರು.
ಎಚ್.ಎಂ.ಎಸ್. ಮುಖಂಡ ಹಾಗೂ ಮಣ್ಣಗುಡ್ಡ ಸರಕಾರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಚಂದ್ರ ಶೆಟ್ಟಿ ಅವರು ಸನ್ಮಾನ ನೆರವೇರಿಸಿದರು. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್ .ಗಟ್ಟಿ, ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್ ಶೆಟ್ಟಿ ಶುಭ ಕೋರಿ ಮಾತನಾಡಿದರು.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಬರ್ಕೆ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ಯಜ್ಞೇಶ್ ಬರ್ಕೆ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿ,ಸನ್ಮಾನ ಪತ್ರ ವಾಚಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಕಾರ್ಯಕ್ರಮ ನಿರೂಪಿಸಿದರು, ರಾಜೇಶ್ ಶೆಟ್ಟಿ ವಂದಿಸಿದರು.