ಕಾಪು : ರಕ್ಷಣಾಪುರ ಜವನೆರ್ ಕಾಪು ಇದರ ನೇತೃತ್ವದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ಸಾರಥ್ಯದಲ್ಲಿ ಸೆ.30 ರಂದು ಕಾಪು ಹೊಸ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಕಾಪು ಪಿಲಿಪರ್ಬ ನಡೆಯಲಿದೆ ಎಂದು ಕಾಪುವಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಪುರ ಜನವೆರ್ ತಂಡದ ಅಧ್ಯಕ್ಷ ನವೀನ್ ಎನ್.ಶೆಟ್ಟಿ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ 10 ತಂಡಗಳು ಹುಲಿವೇಷಧಾರಿಗಳ ತಂಡ ಭಾಗವಹಿಸಲಿದ್ದು, ವಿಜೇತ ತಂಡಗಳಿಗೆ ಪ್ರಥಮ ರೂ. 1.50 ಲಕ್ಷ, ದ್ವಿತೀಯ ರೂ. ಒಂದು ಲಕ್ಷ, ತೃತೀಯ ರೂ. 50 ಸಾವಿರ ಸಹಿತ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಅಲ್ಲದೆ ವಿಶೇಷ ಕರಿಹುಲಿ, ಅಕ್ಕಿಮುಡಿ ಹಾರಿಸುವುದು, ಅತ್ಯುತ್ತಮ ಹುಲಿ ಕುಣಿತಗಾರ ವಿಶೇಷ ಮರಿಹುಲಿ, ಅತ್ಯುತ್ತಮ ತಾಸೆ ವಿಶೇಷ ನಗದು ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ರಕ್ಷಣಾ ಪುರ ಎಂಬ ಹೆಸರಿನಲ್ಲಿ ಮೂರನೇ ಭಾರಿಗೆ ನಡೆಸುವ ಈ ಸ್ಪರ್ಧೆಯು ಕರಾವಳಿಯ ಸಾಂಸ್ಕøತಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗ್ರಾಮೀಣ ಹುಲಿ ಕುಣಿತಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸಂಜೆ 4ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ವಧರ್ಮದ ಗುರುಗಳ ಉಪಸ್ಥಿತಿಯಲ್ಲಿ ಕಾಪು ಒಡೆಯ ಶ್ರೀ ಲಕ್ಷ್ಮೀ ಜನಾಧನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮನೋಹರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಉಭಯ ಜಿಲ್ಲೆಗಳ ಹಲವಾರು ಮುಖಂಡರು, ರಾಜ್ಯಮಟ್ಟದ ಪ್ರಮುಖರು ಭಾಗವಹಿಸಲಿದ್ದಾರೆ. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಮಾಜ ಮುಖಿಯಾಗಿ ಗುರುತಿಸಿಕೊಂಡಿರುವ ಒಂಬತ್ತು ಪ್ರಮುಖರನ್ನು ವೇದಿಕೆಯಲ್ಲಿ ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ವಯೋಲಿನ್, ಚೆಂಡೆ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕøತಿಕ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಿಸಿದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ, ಸುಕುಮಾರ್, ಗಣೇಶ್ ಕೋಟ್ಯಾನ್, ಕಾಪು ದಿವಾಕರ ಶೆಟ್ಟಿ, ಶರ್ಫುದ್ದೀನ್ ಶೇಖ್, ಶಾಂತಲತಾ ಶೆಟ್ಟಿ, ನಿಯಾಝ್, ಜಿತೇಂದ್ರ ಪುರ್ಟಾಡೋ ಉಪಸ್ಥಿತರಿದ್ದರು.