ತಿರುವನಂತಪುರಂ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕೇರಳದಾದ್ಯಂತ ಭಾರೀ ಮಳೆಯಾಗುತ್ತಿದೆ ಗಾಳಿಯ ವೇಗ ಗಂಟೆಗೆ 30–40 ಕಿ.ಮೀ ತಲುಪಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲೂ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಭಾರತ ಹವಾಮಾನ ಇಲಾಖೆಯ (IMD) ಇತ್ತೀಚಿನ ವರದಿ ಪ್ರಕಾರ, ಕೇರಳದಲ್ಲಿ ಭಾನುವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಇದರ ಪರಿಣಾಮ ಗಡಿ ಜಿಲ್ಲೆ ದಕ್ಷಿಣ ಕನ್ನಡದ ಮೇಲೂ ಆಗುವ ಸಾಧ್ಯತೆ ಇದೆ. ಶನಿವಾರ ನಾಲ್ಕು ಉತ್ತರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಸೆಪ್ಟೆಂಬರ್ 27ರಂದು ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಜಾರಿಯಲ್ಲಿದ್ದು, ಎರ್ನಾಕುಲಂ, ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದೇ ವೇಳೆ, ಸೆಪ್ಟೆಂಬರ್ 28ರಂದು ಕೋಯಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ಎಚ್ಚರಿಕೆ ಘೋಷಿಸಲಾಗಿದೆ.
ಹವಾಮಾನ ಅಸ್ಥಿರತೆ ವಾಯುವ್ಯ ಹಾಗೂ ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿದೆ. ಈ ವಾಯುಭಾರ ಕುಸಿತವು ಶುಕ್ರವಾರ ರಾತ್ರಿ ದಕ್ಷಿಣ ಒಡಿಶಾ ಕರಾವಳಿಯ ಬಳಿ ಕೇಂದ್ರೀಕೃತವಾಗಿದ್ದು, ಶನಿವಾರ ಬೆಳಗ್ಗೆ ಪುರಿ ಮತ್ತು ಕಳಿಂಗಪಟ್ಟಣಂ ನಡುವೆ ದಕ್ಷಿಣ ಒಡಿಶಾ–ಉತ್ತರ ಆಂಧ್ರಪ್ರದೇಶ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಕೇರಳ ಮತ್ತು ಲಕ್ಷದ್ವೀಪದಲ್ಲಿ ಭಾನುವಾರದವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ, ಮೇಲ್ಮೈ ಗಾಳಿಯ ವೇಗವು ಗಂಟೆಗೆ 30–40 ಕಿ.ಮೀ ತಲುಪುವ ಸಾಧ್ಯತೆಯೂ ಇದೆ ಎಂದು ಇಲಾಖೆಯ ಮುನ್ಸೂಚನೆ.
ಭಾರೀ ಮಳೆಯ ಪರಿಣಾಮವಾಗಿ ಸಂಚಾರ ಅಡಚಣೆ, ಹಠಾತ್ ಪ್ರವಾಹ, ಜಲಾವೃತ ಹಾಗೂ ಭೂಕುಸಿತ ಸಂಭವಿಸುವ ಅಪಾಯವಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ನೀರು ನಿಂತಿರುವ ಪ್ರದೇಶಗಳನ್ನು ತಪ್ಪಿಸಿ, ದುರ್ಬಲ ಕಟ್ಟಡಗಳಿಂದ ದೂರವಿದ್ದು, ಅಗತ್ಯವಿದ್ದರೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಲಹೆ ನೀಡಿದ್ದಾರೆ.