ಹರಿಯಾಣ: ಅತೀ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಗುರುಗ್ರಾಮದಲ್ಲಿ ಇಂದು(ಸೆ.27) ಮುಂಜಾನೆ ಸಂಭವಿಸಿದೆ.
ಮೃತರಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದ್ದು ಓರ್ವ ಗಂಭೀರ ಗಾಯಗೊಂಡಿದ್ದು ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಕುರಿತು ಮಾಹಿತಿ ನೀಡಿದ ಪೊಲೀಸರು ಗುರುಗ್ರಾಮ-ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯ ಝಾರ್ಸಾ ಫ್ಲೈಓವರ್ ಬಳಿ ಬೆಳಗಿನ ಜಾವ 4:30 ರ ಸುಮಾರಿಗೆ ಅತಿ ವೇಗವಾಗಿ ಬಂದ ಯುಪಿ ನೋಂದಣಿ ಹೊಂದಿರುವ ಥಾರ್ ಕಾರೊಂದು ಚಾಲಕನ ನಿಯಂತ್ರಣ ಕಳೆದು ಡಿವೈಡರ್ ಗೆ ವೇಗವಾಗಿ ಡಿಕ್ಕಿ ಹೂಡೆದ ಪರಿಣಾಮ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿ ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಇದ್ದು ಅದರಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಆತನನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಗುರುಗ್ರಾಮ ಪೊಲೀಸರು ಘಟನಾ ಸ್ಥಳದಲ್ಲಿದ್ದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.