ಸೆಪ್ಟೆಂಬರ್ 30ರಂದು ಕುಡ್ಲದ ಪಿಲಿಪರ್ಬ-4: 10 ಹುಲಿವೇಷ ತಂಡಗಳ ಅದ್ಧೂರಿ ಸ್ಪರ್ಧಾಕೂಟ

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಆಯೋಜನೆಯಾದ ಕುಡ್ಲದ ಪಿಲಿಪರ್ಬದ ನಾಲ್ಕನೇ ಆವೃತ್ತಿ ಸೆಪ್ಟೆಂಬರ್ 30ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಂಡು, 10 ಗಂಟೆಗೆ ಭವ್ಯ ವೇದಿಕೆಯಲ್ಲಿ ಸ್ಪರ್ಧಾಕೂಟ ಆರಂಭವಾಗಲಿದೆ ಎಂದು ಕಾರ್ಯಕ್ರಮದ ನೇತೃತ್ವ ವಹಿಸಿರುವ ಶಾಸಕ ಡಿ. ವೇದವ್ಯಾಸ್ ಕಾಮತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರಾವಳಿ ಭಾಗದ ಜನಪ್ರಿಯ 10 ಹುಲಿವೇಷ ತಂಡಗಳು ವೈಭವದ ಮೆರವಣಿಗೆಯೊಂದಿಗೆ ವೇದಿಕೆಗೆ ಪ್ರವೇಶಿಸಿ, ತಲಾ 20 ನಿಮಿಷಗಳ ಪ್ರದರ್ಶನ ನೀಡಲಿವೆ. ಪ್ರತಿಯೊಂದು ತಂಡಕ್ಕೂ ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು, ಕರಿಹುಲಿ, ಮರಿಹುಲಿ, ಹಿಮ್ಮೇಳ ಹಾಗೂ ಧರಣಿ ಮಂಡಲ ಸೇರಿದಂತೆ ವೈವಿಧ್ಯತೆಯಿಂದ ಕೂಡಿದ ಕಾರ್ಯಕ್ರಮ ಜರುಗಲಿದೆ ಎಂದರು.

ಆರು ಮಂದಿ ತೀರ್ಪುಗಾರರು ಸ್ಪರ್ಧೆಯನ್ನು ಮೌಲ್ಯಮಾಪನ ಮಾಡುವಿದ್ದು, ಇವರಲ್ಲಿ ನಾಲ್ವರು ವೇದಿಕೆಯಲ್ಲಿ ಹಾಗೂ ಇಬ್ಬರು ಥರ್ಡ್ ಅಂಪಾಯರ್ ಆಗಿ ವಿಡಿಯೋ ವೀಕ್ಷಿಸುತ್ತಾ ತೀರ್ಪು ನೀಡಲಿದ್ದಾರೆ. ತಂಡದ ಪ್ರದರ್ಶನದ ಸಂಪೂರ್ಣ ವಿಡಿಯೋ ದಾಖಲಿಸಿ, ಅಗತ್ಯ ಬಿದ್ದರೆ ರೀಪ್ಲೇ ಆಧಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಮತ್‌ ನುಡಿದರು.

ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳೊಂದಿಗೆ, ಶಿಸ್ತಿನ ತಂಡ, ಅತ್ಯುತ್ತಮ ಮೆರವಣಿಗೆ, ಪರ್ಬದ ಪಿಲಿ, ಕಪ್ಪು ಪಿಲಿ, ಮರಿ ಹುಲಿ, ಮುಡಿ, ಶಾಸೆ, ಬಣ್ಣಗಾರಿಕೆ ಹಾಗೂ ಧರಣಿ ಮಂಡಲ ವಿಭಾಗಗಳಲ್ಲಿಯೂ ವಿಶೇಷ ಪ್ರಶಸ್ತಿ ನೀಡಲಾಗುವುದು. ಪ್ರತಿಯೊಂದು ತಂಡಕ್ಕೂ ಗೌರವ ಮೊತ್ತ ನೀಡಲಾಗುವುದು. ಮೈದಾನದಲ್ಲಿ 5 ಸಾವಿರ ಮಂದಿಗೆ ಆಸನ ವ್ಯವಸ್ಥೆ, ದೊಡ್ಡ ಪರದೆ, ನೇರ ಪ್ರಸಾರ, ಅಚ್ಚುಕಟ್ಟಾದ ಪಾರ್ಕಿಂಗ್ ಹಾಗೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಗಿ ರಾತ್ರಿ 10 ಗಂಟೆಯೊಳಗೆ ಮುಗಿಯಲಿದೆ ಎಂದು ವೇದವ್ಯಾಸ ಕಾಮತ್‌ ತಿಳಿಸಿದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ ಮಾತನಾಡಿದರು.  ಸುದ್ದಿಗೋಷ್ಠಿಯಲ್ಲಿ ಶಾನ್ ಕೋಡಿಕೆರೆ, ಕಿರಣ್ ಶೆಣೈ, ಮಂಗಲ್ಪಾಡಿ ನರೇಶ್ ಶೆಣೈ, ನರೇಶ್ ಪ್ರಭು, ದಿವಾಕರ್ ಪಾಂಡೇಶ್ವರ್, ಯತೀಶ್ ಬೈಕಂಪಾಡಿ, ಅಶ್ವಿತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು

ಭಾಗವಹಿಸುವ ತಂಡಗಳು:
ಟೀಮ್ ಪರಶುರಾಮ, ಪಾಂಡೇಶ್ವರ ಶಾರದಾ ಹುಲಿ, ಶಿವಶಕ್ತಿ ಟೈಗರ್ಸ್ ಮಂಜೇಶ್ವರ, ಲೆಜೆಂಡ್ ಟೈಗರ್ಸ್ ಕುಡ್ಲ, ಕಾರ್ಕಳ ಟೈಗರ್ಸ್, ಟೀಮ್ ಅಗತ್ಯ, ಟ್ಯಾಲೆಂಟ್ ಟೈಗರ್ಸ್, ನಂದಿಗುಡ್ಡ ಫ್ರೆಂಡ್ಸ್ ಬಾಬುಗುಡ್ಡ, ಮುಳಿಹಿತ್ತು ಫ್ರೆಂಡ್ಸ್ ಸರ್ಕಲ್ (ಎಂಎಫ್‌ಸಿ) ಮತ್ತು ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಪೊಳಲಿ ಟೈಗರ್ಸ್.

error: Content is protected !!