ನೀರಿನ ಟ್ಯಾಂಕರ್‌ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸಾವು

ಬೆಂಗಳೂರು: ನೀರಿನ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ವೈಟ್‌ ಫೀಲ್ಡ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಮ್ಮಡಿಹಳ್ಳಿ ನಿವಾಸಿ ಮುನಿರಾಜು (52) ಮೃತ ವ್ಯಕ್ತಿ. ಘಟನೆಯಲ್ಲಿ ಅವರ 16 ವರ್ಷದ ಮಗನಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮುನಿರಾಜು, ಅನಾರೋಗ್ಯ ಕಾರಣದಿಂದ ಮನೆಯಲ್ಲೇ ಇದ್ದರು. ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಪುತ್ರನ ಜತೆ ದ್ವಿಚಕ್ರ ವಾಹನದಲ್ಲಿ ಇಮ್ಮಡಿಹಳ್ಳಿ-ನಾಗಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅಪಾರ್ಟ್‌ಮೆಂಟ್‌ ನೀರು ಪೂರೈಸಲು ಬಂದಿದ್ದ ನೀರಿನ ಟ್ಯಾಂಕರ್‌ ಚಾಲಕ ಹಿಮ್ಮುಖವಾಗಿ ವೇಗವಾಗಿ ವಾಹನ ಚಲಾಯಿಸಿ ಮುನಿರಾಜು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಮುನಿರಾಜು ಅವರಿಗೆ ತಲೆ ಹಾಗೂ ದೇಹದ ಇತರೆ ಭಾಗದಲ್ಲಿ ಗಂಭೀರ ಪೆಟ್ಟು ಬಿದ್ದಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ತಡ ರಾತ್ರಿ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಚಾಲಕ ನೀರಿನ ಟ್ಯಾಂಕರ್‌ ಬಿಟ್ಟು ಪರಾರಿಯಾಗಿದ್ದು, ನೀರಿನ ಟ್ಯಾಂಕರ್‌ ವಾಹನ ಜಪ್ತಿ ಮಾಡಲಾಗಿದೆ. ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಅಪಘಾತದಲ್ಲಿ ಗಾಯಗೊಂಡಿರುವ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.

ಈ ಸಂಬಂಧ ವೈಟ್‌ಫೀಲ್ಡ್‌ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!