ಬೆಂಗಳೂರು: ತೆರಿಗೆ ವಂಚನೆ ಆರೋಪ ಸಂಬಂಧ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮೇಲೆ ಬುಧವಾರ(ಸೆ.24) ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕರ್ನಾಟಕ ಹಾಗೂ ಆಂಧ್ರಪ್ರದೇಶದ ವಿವಿಧೆಡೆ ಇರುವ ಖಾಸಗಿ ಶಿಕ್ಷಣ ಸಮೂಹ ಸಂಸ್ಥೆಗಳ ಮೇಲೆ ಏಕ ಕಾಲದಲ್ಲಿ ದಾಳಿ ನಡೆಸಲಾಗಿದೆ. ಬೆಂಗಳೂರಿನ ಹೊಸಕೆರೆಯಲ್ಲಿರುವ ಕಾಲೇಜು, ಹನುಮಂತ ನಗರದ ಕಾಲೇಜು, ಎಲೆಕ್ಟ್ರಾನಿಕ್ ಸಿಟಿ ಕಾಲೇಜು, ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ಕಾಲೇಜು, ಶಿಕ್ಷಣ ಸಂಸ್ಥೆಯ ಮಾಲೀಕರ ನಿವಾಸ ಹಾಗೂ ಸಂಬಂಧಿಕರ ಮನೆಗಳಲ್ಲಿ ಶೋಧ ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಬುಧವಾರ ಬೆಳಗ್ಗೆ 6 ಗಂಟೆಗೆ ಹಲವು ಕಾರುಗಳಲ್ಲಿ ಆಗಮಿಸಿದ ಚೆನ್ನೈ ಮತ್ತು ಆಂಧ್ರಪ್ರದೇಶ ಹಾಗೂ ಕರ್ನಾಟಕದ 200ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ವಿವಿಧ ತಂಡಗಳಾಗಿ ಕಾರ್ಯಾಚರಣೆ ನಡೆಸಿದ್ದು, ನಿರಂತರವಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ಇರುವ ಮಾಲಿಕರ ನಿವಾಸದ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಶಿಕ್ಷಣ ಸಂಸ್ಥೆಯ ನಿರ್ವಹಣೆಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಸಂಸ್ಥೆಯ ಲೆಕ್ಕ ಪತ್ರಗಳನ್ನು ಪರಿಶೀಲನೆಗೊಳಪಡಿಸಿರುವ ಅಧಿ ಕಾರಿಗಳು, ಆಡಳಿತ ಮಂಡಳಿ ಹಾಗೂ ಕಾಲೇಜಿನ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಮಾಲೀಕರಿಗೆ ಸಂಬಂಧಪಟ್ಟಂತಹ ಆಪ್ತರು, ಸಂಬಂಧಿಕರ ಆಸ್ತಿ ವಿವರ ಹಾಗೂ ಬ್ಯಾಂಕ್ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳ ವಶಕ್ಕೆ ಪಡೆಯಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.