ಮಲ್ಪೆ: ಮೀನುಗಾರಿಕೆ ಬೋಟ್‌ನಲ್ಲಿ ಕೆಲಸಮಾಡುತ್ತಿದ್ದ ಮೀನುಗಾರರೋರ್ವರು ನೀರಿಗೆ ಬಿದ್ದು ಮೃತಪಟ್ಟ ಘಟನೆ ಮಲ್ಪೆ ಬಂದರು ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡಿನ ಉರಿಯರಿಕುನ್ನು ಪುದಿಯತುರ ಗ್ರಾಮದ ಥದೈಸ್ ಎಂ.(45) ಮೃತರು.
ಥದೈಸ್ ತಮಿಳುನಾಡಿನ ಜರೀನ ಬಿನೇಶ್ ಎಂಬವರ ಬೋಟಿನಲ್ಲಿ ಕೆಲಸ ಮಾಡುತ್ತಿದ್ದರು. ಮಾ.1ರಂದು ಮಧ್ಯಾಹ್ನ ಮೀನುಗಾರಿಕೆ ಕೆಲಸ ಮುಗಿಸಿ ಬೋಟನ್ನು ನಿಲ್ಲಿಸಿ ಮೇಲೆ ಬರುತ್ತಿರುವಾಗ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದರು. ಸಹ ಮೀನುಗಾರರು ತಕ್ಷಣವೇ ಶೋಧ ಕಾರ್ಯ ನಡೆಸಿ ಮೇಲಕ್ಕೆ ತಂದು ವಿಚಾರಿಸಿದಾಗ ತೀವ್ರ ಅಸ್ವಸ್ಥಗೊಂಡಿದ್ದರು.

ಉಡುಪಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಥದೈಸ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.