ಬೆಂಗಳೂರು: ಶಾಲಾ ಶಿಕ್ಷಕರ ವೇತನ ಪರಿಷ್ಕರಣೆ, ಮಾನ್ಯತಾ ಶುಲ್ಕ ಪಾವತಿ ಸೇರಿದಂತೆ ವಿವಿಧ ಕಾರಣಗಳಿಂದ ಖಾಸಗಿ ಶಾಲೆಗಳು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಶೇ.15ರವರೆಗೆ ಶುಲ್ಕವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಖಾಸಗಿ ಶಾಲೆಗಳ ಸಂಘಗಳು ತಿಳಿಸಿವೆ.

ಕ್ಯಾಮ್ಸ್ ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಪ್ರತಿ ವರ್ಷ ಶೇ.8-10ರಷ್ಟು ಶುಲ್ಕ ಹೆಚ್ಚಳ ಮಾಡಲಾಗುತ್ತಿತ್ತು. 2026-27ನೇ ಸಾಲಿಗೆ ಕೆಲವು ಶಾಲೆಗಳು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಶುಲ್ಕ ಏರಿಕೆ ಮಾಡಲಿವೆ. ಕನಿಷ್ಠ ಶೇ.8 ರಿಂದ ಗರಿಷ್ಠ 15ರವರೆಗೂ ಶುಲ್ಕ ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.

ಕೃಪಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಕಟನೆ ಹೊರಡಿಸಿದ್ದು, ಶಾಲಾ ಶಿಕ್ಷಕರು ತಮ್ಮ ವೇತನವನ್ನು ಶೇ.20ರಷ್ಟು ಹೆಚ್ಚಳ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದು, ಅವರ ವೇತನವನ್ನು ಅಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲ. ಆದರೆ 2026-27ರಲ್ಲಿ ಶಿಕ್ಷಕ ವೇತನವನ್ನು ಪರಿಷ್ಕರಣೆ ಮಾಡಬೇಕಾಗಿದೆ. ಅಲ್ಲದೆ ಶಾಲೆಗಳ ನಿರ್ವಹಣೆಯನ್ನು ಮಾಡಬೇಕಾಗಿದೆ. ಹೀಗಾಗಿ ಖಾಸಗಿ ಶಾಲೆಗಳ ಶುಲ್ಕ ಶೇ.15ರಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದರು.